ಬೆಂಗಳೂರು, ಡಿ.24: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನೂತನವಾಗಿ ಪ್ರಾರಂಭಿಸಲಾದ ನಮ್ಮ ಕಾರ್ಗೋ- ‘ಟ್ರಕ್ ಸೇವೆ’ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಚಾಲನೆ ನೀಡಿದರು. 20 ನೂತನ ಟ್ರಕ್ಕುಗಳಿಗೆ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದ ಸಚಿವರು ಮಾತನಾಡುತ್ತಾ, ಮುಂದಿನ ಒಂದು ತಿಂಗಳಿನಲ್ಲಿ 100 ಟ್ರಕ್ಕುಗಳನ್ನು, ಒಂದು ವರ್ಷದೊಳಗಾಗಿ 500 ಟ್ರಕ್ಕುಗಳನ್ನು ಸೇರ್ಪಡೆ ಮಾಡಲಾಗುವುದು ಮತ್ತು ಪ್ರಸಕ್ತ ಪೀಣ್ಯದಲ್ಲಿರುವ ನಿಗಮದ ಬಸವೇಶ್ವರ ಬಸ್ ನಿಲ್ದಾಣವನ್ನು ಈ ನಮ್ಮಕಾರ್ಗೋ ಟ್ರಕ್ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗುವುದು. ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಘಟಕವನ್ನಾಗಿ ಬಳಸಿ , ಬಸ್ ನಿಲ್ದಾಣದಲ್ಲಿರುವ ಸ್ಥಳವನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಿ ವಾಣಿಜ್ಯ ಉಪಯೋಗಕ್ಕಾಗಿ ಬಳಸಲು ಉದ್ದೇಶಿಸಲಾಗಿದೆ. ಟ್ರಕ್ ಸೇವೆಯು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಯಿಂದ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಿಗೆ ಲಭ್ಯವಿರುತ್ತದೆ ಎಂದು ಹೇಳಿದರು. ವಿ. ಅನ್ಬುಕುಮಾರ್, ಡಾ. ನಂದಿನಿ ದೇವಿ. ಕೆ., ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ನಿಗಮವು ಗ್ರಾಹಕರುಗಳ ಅಗತ್ಯತೆಗನುಗುಣವಾಗಿ ಟ್ರಕ್ ಸೇವೆ ಒದಗಿಸಲಿದ್ದು, ಇಚ್ಚೆಯುಳ್ಳ ಆಸಕ್ತ ಗ್ರಾಹಕರು ತಮ್ಮ ಅಗತ್ಯತೆಗಳ ಮಾಹಿತಿ / ವಿವರಗಳನ್ನು ಒದಗಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಕಾಲ್ ಸೆಂಟರ್ ಸಂಖ್ಯೆ – 080-26252625 ಇ-ಮೇಲ್ ವಿಳಾಸ – [email protected]