ಉಡುಪಿ ಡಿ.22 : ಕಾರ್ಕಳ ತಾಲೂಕು ಯರ್ಲಪಾಡಿ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಉಡುಪಿಯ ಶೆಫಿನ್ಸ್ ವತಿಯಿಂದ ನಡೆಯುತ್ತಿರುವ ಶಾಲಾ ಮಕ್ಕಳ ಸ್ಪೋಕನ್ ಇಂಗ್ಲಿಷ್ ತರಬೇತಿ ಕಾರ್ಯಕ್ರಮಕ್ಕೆ ಮಕ್ಕಳ ಪುಸ್ತಕಗಳಿಗಾಗಿ ರೂ. 25,550/- ನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸುನಂದಾ ಎಲ್. ಎಸ್. ಅವರು ದೇಣಿಗೆಯಾಗಿ ನೀಡಿ ಇತರ ಸರಕಾರಿ ನೌಕರರಿಗೆ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ ಬದುಕು ಕಟ್ಟಿಕೊಳ್ಳುತ್ತಿರುವವರಿಗೆ ಮಾದರಿಯಾಗಿದ್ದಾರೆ. ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರನ್ನು ಶೆಫಿನ್ಸ್ ಸಂಸ್ಥೆಯ ಮತ್ತು ಶಾಲಾಭಿವೃದ್ಧಿ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಸುನಂದಾ ಎಲ್. ಎಸ್, ಇಂದು ನನ್ನ ಕನಸೊಂದು ಈಡೇರುತ್ತಿದೆ. ನನ್ನ ಶಾಲೆಯಲ್ಲಿ ಈಗ ಒಟ್ಟು 100 ಮಕ್ಕಳಿದ್ದಾರೆ. ನನ್ನ ಶಾಲೆಯ ಪ್ರತಿ ಮಗುವೂ ಇಂಗ್ಲಿಷ್ ನಲ್ಲಿ ಮಾತನಾಡಬೇಕು. ಯಾವುದೇ ಇಂಗ್ಲಿಷ್ ಮೀಡಿಯಂ ಶಾಲೆಯ ಮಕ್ಕಳೆದುರಿಗೆ ನನ್ನ ಶಾಲೆಯ ಪ್ರತೀ ಮಗುವೂ ತಲೆಯೆತ್ತಿ ಇಂಗ್ಲಿಷ್ ನಲ್ಲಿ ಮಾತನಾಡುವಂತಾಗಬೇಕು. ಅದನ್ನು ಕಂಡು ನನ್ನ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಮುಂದಿನ ವರ್ಷ ಹೆಚ್ಚಾದರೆ ಅದೇ ನನಗೆ ಸನ್ಮಾನ ಹಾಗೂ ಅದಕ್ಕಿಂತ ದೊಡ್ಡ ಸಂತೋಷ ಬೇರೆ ಇಲ್ಲ. ಯಾವುದೇ ಸನ್ಮಾನಕ್ಕಾಗಿ ನಾನು ಈ ಕೆಲಸ ಮಾಡ್ತಾ ಇಲ್ಲ, ಮಕ್ಕಳ ಭವಿಷ್ಯಕ್ಕಾಗಿ ದೇಣಿಗೆ ಕೊಡುತ್ತಿದ್ದು, ಮಕ್ಕಳು ಬೆಳವಣಿಗೆಯಾದರೆ ಅದುವೇ ನಮಗೆ ಸಂತೃಪ್ತಿ.
ನಾನು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ, ಉದ್ಯೋಗ ಪಡೆದಿದ್ದು, ಅದರಿಂದಾಗಿಯೇ ಬದುಕನ್ನು ಕಟ್ಟಿಕೊಂಡಿರುವಾಗ ಕನ್ನಡ ಮಾಧ್ಯಮ ಶಾಲೆಗಾಗಿ ಕಾಣಿಕೆ ಕೊಡುವುದು ನನ್ನ ಕರ್ತವ್ಯವೆಂದು ತಿಳಿಯುತ್ತೇನೆ. ನನ್ನ ಕಿರು ಕಾಣಿಕೆಯಿಂದ ಮುಂದಿನ ದಿನಗಳಲ್ಲಿ ನನ್ನ ಶಾಲೆ ಶ್ರೇಯೋಭಿವೃದ್ಧಿ ಪಡೆದರೆ ಅದಕ್ಕಿಂತ ದೊಡ್ಡ ಸಂತಸ ನನಗೆ ಬೇರೇನಿದೆ? ಹಾಗಾಗಿ ನನಗೆ ನಿಜವಾಗಿಯೂ ಸನ್ಮಾನ ಸ್ವೀಕರಿಸಲು ಮನಸ್ಸಿಲ್ಲ; ಆದರೂ ಶೆಫಿನ್ಸ್ ನವರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಸನ್ಮಾನ ಸ್ವೀಕರಿಸುತ್ತಿದ್ದೇನೆ ಎಂದು ಸನ್ಮಾನ ಸ್ವೀಕರಿಸಿದ ಅವರು ಸಭೆಯನ್ನುದ್ದೇಶಿಸಿ ಹೇಳಿದರು.
ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿಯು ಶೆಫಿನ್ಸ್ ಮತ್ತು ದಾನಿಗಳ ಸಹಯೋಗದಲ್ಲಿ ನಡೆಯುತ್ತಿದ್ದು, ತರಬೇತಿಯನ್ನು ಶೆಫಿನ್ಸ್ ನೋಡಿಕೊಳ್ಳುತ್ತಿದ್ದರೆ ಮಕ್ಕಳ ಪುಸ್ತಕಗಳನ್ನು ಸ್ಥಳೀಯ ದಾನಿಗಳಿಂದ ದೇಣಿಗೆ ರೂಪದಲ್ಲಿ ಪಡೆಯಬೇಕಾಗಿದೆ. ಸರಕಾರಿ ನೌಕರರೂ ಸೇರಿದಂತೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ, ಸಂಪಾದನೆ ಮಾಡುತ್ತಿರುವ ಪ್ರತಿಯೊಬ್ಬರೂ ಸುನಂದಾ ಅವರನ್ನು ಮಾದರಿಯಾಗಿಸಿಕೊಂಡು, ತಮ್ಮ ಊರಿನ ಒಂದು ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲು ಮುಂದೆ ಬಂದಲ್ಲಿ ನಮ್ಮ ರಾಜ್ಯದ ಎಲ್ಲಾ ಶಾಲೆಗಳೂ ಹಿಂದಿನಂತೆ ಕಂಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ತಮ್ಮೂರಿನ ಶಾಲೆಯೊಂದಕ್ಕೆ ಪುಸ್ತಕಗಳ ಕೊಡುಗೆ ನೀಡಿ, ಮಕ್ಕಳಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲು ಆಸಕ್ತ ದಾನಿಗಳು 9008418534 ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ಶೆಫಿನ್ಸ್ ನಿರ್ದೇಶಕ ಮನೋಜ್ ಕಡಬ ತಮ್ಮ ಅಭಿನಂದನಾ ಭಾಷಣದಲ್ಲಿ ಹೇಳಿದರು.
ಸಮಾರಂಭದಲ್ಲಿ ಶೆಫಿನ್ಸ್ನ ಮುಖ್ಯಸ್ಥೆ ಶೆರ್ಲಿ ಮನೋಜ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರುಗಳಾದ ನರಂಗ ಕುಲಾಲ್ ಮತ್ತು ದಿನೇಶ್ ಪೂಜಾರಿ, ಶಾಲಾ ಅಧ್ಯಾಪಕರುಗಳು, ವಿದ್ಯಾರ್ಥಿ ನಾಯಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.