ಮಂಗಳೂರು, ಡಿ. 18: ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುಜಿಸಿ-ನೆಟ್ ಮತ್ತು ಕೆಸೆಟ್ ಪರೀಕ್ಷೆಗಳಿಗೆ ಒಂದು ವಾರದ ತರಬೇತಿ ಕಾರ್ಯಕ್ರಮವನ್ನು ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶ ಕಾಲೇಜಿನ ಐಕ್ಯೂಏಸಿ ಸಹಯೋಗದೊಂದಿಗೆ ಆಯೋಜಿಸಿದ್ದು, ಡಿಸೆಂಬರ್ 16 ರವರೆಗೆ ನಡೆಯಿತು. ತರಬೇತಿ ಕಾರ್ಯಕ್ರಮವನ್ನು ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವರಾಮ ಪಿ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ಅವರು, ತರಬೇತಿ ಕಾರ್ಯಕ್ರಮದ ಅಗತ್ಯವನ್ನು ವಿವರಿಸಿದರು. ಒಂದು ವಾರದ ತರಬೇತಿ ಕಾರ್ಯಕ್ರಮದಲ್ಲಿ ಮಂಗಳೂರು ಜಂಟಿ ನಿರ್ದೇಶಕ ಕಛೇರಿಯ ವಿಶೇಷಾಧಿಕಾರಿ ದೇವಿಪ್ರಸಾದ್, ಡಾ. ಅಜಯ್ ಅಂಚನ್, ಸ್ಟೀವನ್ ರಾಬರ್ಟ್ ಟೆಲ್ಲಿಸ್, ಲಿಥಿನ್, ಸಂಧ್ಯಾ, ಮೋನಿಶಾ ಶೆಟ್ಟಿ, ಡಾ.ಜ್ಯೋತಿ ಪ್ರವೀಣ್, ಪ್ರಸನ್ನ ಕುಮಾರ್, ಡಾ.ಸೌಮ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಯುಜಿಸಿ-ನೆಟ್ ಮತ್ತು ಕೆಸೆಟ್ ಪರೀಕ್ಷೆಗಳ ವಿವಿಧ ಅಂಶಗಳ ಕುರಿತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಂಯೋಜಕರಾದ ಡಾ. ಮಾಲತಿ ಕೆ. ತರಬೇತಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಸ್ನಾತಕೋತ್ತರ ವಿಭಾಗದ ಶೈಕ್ಷಣಿಕ ಸಲಹೆಗಾರ ಪ್ರೊ.ನಾಗಪ್ಪ ಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಂಯೋಜಕರಾದ ಡಾ.ಜ್ಯೋತಿಪ್ರಿಯಾ, ಸುವರ್ಣಮಾಲಿನಿ, ಡಾ. ನಿತಿನ್ ಚೋಲ್ವೇಕರ್, ಡಾ. ಲೋಕೇಶನಾಥ್, ಅರುಣಾ ಕುಮಾರಿ ಉಪಸ್ಥಿತರಿದ್ದರು. ೧೫೦ ಸ್ನಾತಕೋತ್ತರ ವಿದ್ಯಾರ್ಥಿಗಳು ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆದರು.