ಪ್ರತೀ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಣುವ ಮಿಥುನ ರಾಶಿಯಿಂದ ಚಿಮ್ಮುವ ‘ಜೆಮಿನಿಡ್’ ಉಲ್ಕಾಪಾತ ಇಂದು ಮತ್ತು ನಾಳೆ ಮಧ್ಯ ರಾತ್ರಿಯಿಂದ ವಿಜೃಂಭಿಸಲಿದೆ.
ವರ್ಷದಲ್ಲಿ ಸುಮಾರು 22 ಉಲ್ಕಾಪಾತ ಸಂಭವಿಸಿದರೂ ಎಲ್ಲವೂ ಚೆನ್ನಾಗಿರುವುದಿಲ್ಲ. ಉಲ್ಕೆಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ. ಆದರೆ ಇಂದು ಸುಮಾರು ಗಂಟೆಗೆ ನೂರಕ್ಕಿಂತಲೂ ಹೆಚ್ಚು ಬಣ್ಣ ಬಣ್ಣದ ಉಲ್ಕೆಗಳನ್ನು ನೋಡಿ ಆನಂದಿಸಬಹುದು.
ಈ ಉಲ್ಕೆಗಳು ಹೆಚ್ಚಿನವು ಸೂರ್ಯನ ಸುತ್ತಲೂ ಸುತ್ತುವ ಧೂಮಕೇತುಗಳ ಧೂಳು. ಆದರೆ ಇಂದಿನ ಜೆಮಿನಿಡ್ ಹಾಗಲ್ಲ. ಇದೊಂದು ದೀರ್ಘ ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುವ ಸುಮಾರು 6 ಕಿಮೀ ಗಾತ್ರದ ಕಲ್ಲುಂಡೆಯ 3200 ಪೇಥಾನ್ (Phaethon asteroid) ಆಸ್ಟೆರೈೂಯ್ಡ್ ನ ಧೂಳು.
ಇಂದು ರಾತ್ರಿ ಸುಮಾರು 1 ಗಂಟೆಗೆ ನಡು ನೆತ್ತಿಗೆ ಬರುವ ಮಿಥುನ ರಾಶಿಯಿಂದ ಗಂಟೆಗೆ 120 ಉಲ್ಕೆಗಳನ್ನು ಗುರುತಿಸಬಹುದೆಂದು ಅಂದಾಜಿಸಿದ್ದಾರೆ. ಬೇರೆಲ್ಲ ಉಲ್ಕಾಪಾತಗಳಿಗಿಂತ ಇದು ವಿಭಿನ್ನ. ಇಂದು ಎಲ್ಲಾ ಬಣ್ಣಗಳ ಉಲ್ಕೆಗಳನ್ನೂ ನೋಡಬಹುದು. ಬಿಳಿ, ಕೆಂಪು, ಹಳದಿ, ಹಸಿರು ಹಾಗೂ ನೀಲಿ.
ನಮ್ಮ ಮೇಲೆಯೇ ಬಿತ್ತು ಅಂತ ಅನಿಸುವ ಈ ಉಲ್ಕಾಪಾತಗಳು ಹಾಗೇನೂ ಅಲ್ಲ. ಭೂ ವಾತಾವರಣದಿಂದಾಗಿ ಸುಮಾರು 60 – 70 ಕಿಮಿ ಎತ್ತರದ ಆಕಾಶದಲ್ಲೇ ಈ ಧೂಳಿನ ಕಣಗಳು ಘರ್ಷಣೆಯಿಂದ ಉರಿದು ಹೋಗುತ್ತವೆ. ಮಿಥುನ ರಾಶಿಯೇ ನೋಡಲು ಚೆಂದ. ಮಹಾವ್ಯಾಧ ನಕ್ಷತ್ರ ಪುಂಜವೇ ಚೆಂದ. ಅದರ ಪಕ್ಕ ಇರುವ ಪುನರ್ವಸು ನಕ್ಷತ್ರ ನೋಡಲು ಚೆಂದ. ಅದರಲ್ಲೂ ಇದೀಗ ಸಿಡಿಯಬಹುದಾದ ಬೃಹತ್ ಆರ್ದ್ರಾ ನಕ್ಷತ್ರ, ರೆಡ್ ಸೂಪರ್ ಜೈಂಟ್.
ಆಕಾಶ ವೀಕ್ಷಣೆಗೆ ಈ ಮಾರ್ಗಶೀರ ಮಾಸ ಬಲು ಸೊಗಸು. ಅದರೊಂದಿಗೆ ಇಂದಿನ ಆಕಾಶದ ಈ ಉಲ್ಕಾಪಾತದ ದುರುಸಿನ ಆಟವನ್ನು ನೋಡಿ ಆನಂದಿಸಿ.
ಡಾ. ಎ.ಪಿ. ಭಟ್, ಉಡುಪಿ.