ನವದೆಹಲಿ, ಡಿ.13: ಬುಧವಾರ ನಡೆದ ಸಂಸತ್ತಿನ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಲೋಕಸಭೆಯ ಸಭಾಂಗಣದಲ್ಲಿ ಬಂಧನಕ್ಕೊಳಗಾಗಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್ ಮತ್ತು ಸಂಸತ್ತಿನ ಹೊರಗೆ ಸಿಕ್ಕಿಬಿದ್ದಿರುವ ಅಮೋಲ್ ಶಿಂಧೆ ಮತ್ತು ನೀಲಂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಲಲಿತ್ ಮತ್ತು ವಿಕ್ರಮ್ ಅವರ ಸಹಚರರು ಎಂದು ಶಂಕಿಸಲಾಗಿದೆ, ವಿಕ್ರಮ್ ಅವರನ್ನು ಗುರುಗ್ರಾಮ್‌ನಿಂದ ಬಂಧಿಸಲಾಗಿದೆ, ಲಲಿತ್‌ನನ್ನು ಬಂಧಿಸಲು ದೆಹಲಿ ಪೊಲೀಸ್ ತಂಡಗಳನ್ನು ವಿವಿಧ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶೂನ್ಯ ವೇಳೆಯಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಅವರು ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದರು, ಡಬ್ಬಿಗಳಿಂದ ಹಳದಿ ಅನಿಲವನ್ನು ಸಿಡಿಸಿ ಘೋಷಣೆಗಳನ್ನು ಕೂಗುತ್ತಾ ಬಂದ ಸಂದರ್ಭದಲ್ಲಿ ಅಲ್ಲಿದ್ದ ಸಂಸದರು ಆರೋಪಿಗಳನ್ನು ಹಿಡಿದು ಮೈಚಳಿ ಬಿಡಿಸಿದರು. ಅದೇ ಸಮಯದಲ್ಲಿ, ಅಮೋಲ್ ಶಿಂಧೆ ಮತ್ತು ನೀಲಂ ಸಂಸತ್ತಿನ ಆವರಣದ ಹೊರಗೆ ‘ತನಾಶಾಹಿ ನಹೀ ಚಲೇಗಿ’ ಎಂದು ಘೋಷಣೆಗಳನ್ನು ಕೂಗುತ್ತಾ ಡಬ್ಬಿಗಳಿಂದ ಬಣ್ಣದ ಅನಿಲವನ್ನು ಸಿಡಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಸಂಪರ್ಕದಲ್ಲಿದ್ದ ಆರೋಪಿಗಳು ಕೆಲವು ದಿನಗಳ ಹಿಂದೆಯೇ ಈ ಯೋಜನೆಯನ್ನು ರೂಪಿಸಿದ್ದರು ಎನ್ನಲಾಗಿದೆ.
ಆರೋಪಿಗಳ ಪೈಕಿ ಐವರು ಸಂಸತ್ತಿಗೆ ಬರುವ ಮೊದಲು ಗುರುಗ್ರಾಮ್‌ನಲ್ಲಿರುವ ವಿಕ್ರಮ್ ಅವರ ನಿವಾಸದಲ್ಲಿ ತಂಗಿದ್ದರು. ಯೋಜನೆಯ ಪ್ರಕಾರ, ಎಲ್ಲಾ ಆರು ಮಂದಿ ಸಂಸತ್ತಿನ ಒಳಗೆ ಹೋಗಲು ಬಯಸಿದ್ದರು ಆದರೆ ಇಬ್ಬರಿಗೆ ಮಾತ್ರ ಪಾಸ್‌ಗಳು ದೊರೆತವು ಎಂದು ಮೂಲಗಳು ತಿಳಿಸಿವೆ. ಅಮೋಲ್ ಶಿಂಧೆಯ ವಿಚಾರಣೆಯಿಂದ ಆರು ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪರಿಚಿತರು ಎಂದು ತಿಳಿದುಬಂದಿದೆ. ಭದ್ರತಾ ಏಜೆನ್ಸಿಗಳು ಅವರಿಗೆ ಯಾರಾದರೂ ಅಥವಾ ಯಾವುದೇ ಸಂಸ್ಥೆಯಿಂದ ಸೂಚನೆ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರೈತರ ಪ್ರತಿಭಟನೆ, ಮಣಿಪುರ ಬಿಕ್ಕಟ್ಟು, ನಿರುದ್ಯೋಗದಂತಹ ಸಮಸ್ಯೆಗಳಿಂದ ಅವರು ಅಸಮಾಧಾನಗೊಂಡಿದ್ದರು, ಅದಕ್ಕಾಗಿಯೇ ಅವರು ಈ ಕೃತ್ಯ ಎಸಗಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ಅಮೋಲ್ ಹೇಳಿದರು ಎಂದು ಪೊಲೀಸ್ ಮೂಲಗಳು ಪಿಟಿಐಗೆ ತಿಳಿಸಿದೆ.