ನವದೆಹಲಿ, ಡಿ.10: ದೇಶದ ಇತಿಹಾಸದಲ್ಲಿ ಮೊದಲು ಎಂಬಂತೆ ಅಕ್ರಮ ನಗದು ಇರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಒಡೆತನದ ಒಡಿಶಾ ಮತ್ತು ರಾಂಚಿಯಲ್ಲಿರುವ ವಿವಿಧೆಡೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಇಲ್ಲಿಯವರೆಗೆ 300 ಕೋಟಿ ರೂ.ಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದ್ದು, ಇನ್ನಷ್ಟು ನಗದು ವಶಪಡಿಸಿಕೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ. ಚಿನ್ನಾಭರಣ ಸೇರಿದಂತೆ ಒಟ್ಟು ಮೊತ್ತ 500 ಕೋಟಿ ರೂ ದಾಟುವ ಸಾಧ್ಯತೆಯಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ನೋಟು ಎಣಿಸಲು 40 ಯಂತ್ರ; ಹೆಚ್ಚುವರಿ ಸಿಬ್ಬಂದಿ: ದಾಳಿ ನಡೆಸಿದ ಸ್ಥಳಗಳಲ್ಲಿ ಪತ್ತೆಯಾದ ನೋಟುಗಳನ್ನು ಎಣಿಸಲು ಆದಾಯ ತೆರಿಗೆ ಇಲಾಖೆಯು 40ಕ್ಕೂ ಅಧಿಕ ದೊಡ್ಡ ಮತ್ತು ಸಣ್ಣ ಯಂತ್ರಗಳನ್ನು ಬಳಸುತ್ತಿದೆ. ಎಣಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಲಾಖೆ ಮತ್ತು ಬ್ಯಾಂಕ್ಗಳ ಹೆಚ್ಚಿನ ಉದ್ಯೋಗಿಗಳನ್ನು ನಿಯೋಜಿಸಲಾಗಿದೆ.
ಕಾಂಗ್ರೆಸ್ ವಿರುದ್ಧ ಪ್ರಧಾನಿ ವಾಗ್ದಾಳಿ: ದಾಳಿಯ ಕುರಿತು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ನಾಗರಿಕರು ದಾಳಿಯ ಸಂದರ್ಭ ಸಿಕ್ಕಿದ ನೋಟುಗಳ ರಾಶಿಯನ್ನು ನೋಡಬೇಕು ನಂತರ ವಿರೋಧ ಪಕ್ಷದ ನಾಯಕರ ಭಾಷಣಗಳನ್ನು ಕೇಳಬೇಕು. ಸಾರ್ವಜನಿಕರಿಂದ ಲೂಟಿ ಮಾಡಿದ ಪ್ರತಿ ಪೈಸೆಯನ್ನು ಹಿಂದಿರುಗಿಸಬೇಕು, ಇದು ಮೋದಿಯ ಗ್ಯಾರಂಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ಬರೆದಿದ್ದಾರೆ.
ಕಾಂಗ್ರೆಸ್ ಪಾತ್ರ ಇಲ್ಲ: ಜಾರ್ಖಂಡ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಕಂಪನಿಯಿಂದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಂತರವನ್ನು ಕಾಪಾಡಿಕೊಂಡಿದೆ. ಧೀರಜ್ ಸಾಹು ಅವರ ವ್ಯವಹಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ಅಕ್ರಮ ಆಸ್ತಿಯ ಬಗ್ಗೆ ಅವರೇ ಉತ್ತರ ನೀಡಬೇಕು, ನಮಗೆ ಸಂಬಂಧವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.