ಬ್ರಹ್ಮಾವರ, ಡಿ.10: ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆ, ರುಡ್ಸೆಟ್ ತರಬೇತಿ ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಪಶುಸಖಿಯರಿಗೆ ಸಮಗ್ರ ಜಾನುವಾರು ನಿರ್ವಹಣೆ ಕುರಿತು 6 ದಿನಗಳ ತರಬೇತಿಯ ಸಮಾರೋಪ ಸಮಾರಂಭ ಬ್ರಹ್ಮಾವರದ ರುಡ್ಸೆಟ್ ಸಂಸ್ಥೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಎಂ. ಸಿ ರೆಡ್ಡಪ್ಪ, ಪಶುಸಖಿಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಇಂದು ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆ ಮೂಲಕ ವಿವಿಧ ಸೇವೆ, ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪಶುಸಖಿಯರನ್ನು ಆಯ್ಕೆ ಮಾಡಿ ನಿಯೋಜಿಸಲಾಗಿದೆ. ನಿಯೋಜನೆಗೊಂಡ ಪಶುಸಖಿಯರು ಗ್ರಾಮ ಪಂಚಾಯತ್ ಮಟ್ಟದಲ್ಲಿ ರೈತರ ಜಾನುವಾರುಗಳ ಸಾಕಾಣಿಕೆ, ಪೋಷಣೆ ಹಾಗೂ ನಿರ್ವಹಣೆಗೆ ಸಂಬಂಧಪಟ್ಟ ಮಾಹಿತಿ ನೀಡುವ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ಹೈನುಗಾರಿಕೆ ಕ್ಷೇತ್ರದಲ್ಲಿ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಇದನ್ನು ಗ್ರಾಮೀಣ ಪ್ರದೇಶದ ರೈತರಿಗೆ ತಲುಪಿಸಲು ಪಶುಸಖಿಯರು ಸೇತುವೆಯಾಗಿ ಕರ್ತವ್ಯನಿರ್ವಹಿಸಬೇಕು. ಇನ್ನು ಮುಂದೆ ಗ್ರಾಮೀಣ ಪ್ರದೇಶ ರೈತರು ಹೈನುಗಾರಿಕೆ ಹಾಗೂ ಜಾನುವಾರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಹಾಗೂ ಸಮಸ್ಯೆಯನ್ನು ಪ್ರಾಥಮಿಕ ಹಂತವಾಗಿ ಪಶುಸಖಿಯರನ್ನು ಭೇಟಿ ಮಾಡಿ ಸಂಬಂಧಿಸಿದ ವೈದ್ಯರನ್ನು ಸಂಪರ್ಕಿಸಬಹುದಾಗಿದೆ. ಆ ಮೂಲಕ ಜಾನುವಾರುಗಳ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪಶುಸಖಿಯರು ಕರ್ತವ್ಯ ನಿರ್ವಹಿಸಬೇಕು ಎಂದರು.
ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮೀಶ್ ಮಾತನಾಡಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಶುಸಖಿಯರ ಸೇವೆ ಮಹತ್ವವಾಗಿದ್ದು ಜಾನುವಾರುಗಳ ಸಮಸ್ಯೆಗೆ ಗ್ರಾಮ ಮಟ್ಟದಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು. ನಂತರ ಜಿಲ್ಲಾ ಪಂಚಾಯತ ನ ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್, ಮಾತನಾಡಿ ಇಂದು ಇಲಾಖೆಯ ವತಿಯಿಂದ ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಹಾಗೂ ಸೌಲಭ್ಯಗಳನ್ನು ಗ್ರಾಮದ ಮಹಿಳೆಯರಿಗೆ ತಲುಪಿಸಲು ಬೇರೆ ಬೇರೆ ಸಖಿಯರನ್ನು ಆಯ್ಕೆ ಮಾಡಲಾಗಿದೆ. ಹೈನುಗಾರಿಕೆ ಹಾಗೂ ಜಾನುವಾರು ಕ್ಷೇತ್ರಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಹಾಗೂ ಸೇವೆಗಳನ್ನು ತಲುಪಿಸಲು ಪ್ರತಿ ಗ್ರಾಮ ಪಂಚಾಯತ್ ಗೆ ಒಂದರಂತೆ ಜಿಲ್ಲೆಯಲ್ಲಿ ಒಟ್ಟು 155 ಪಶುಸಖಿಯರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಗೊಂಡ ಪಶುಸಖಿಯರು ಸಂಜೀವಿನಿ ಯೋಜನೆ ಹಾಗೂ ಪಶುಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದು ಹೈನುಗಾರಿಕೆ ಕ್ಷೇತ್ರ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಗ್ರಾಮ ಮಟ್ಟದ ರೈತರಿಗೆ ತಲುಪಿಸುವ ಕೆಲಸವನ್ನು ಪಶುಸಖಿಯರು ನಿರ್ವಹಿಸಬೇಕು, ಆ ಮೂಲಕ ಸಂಜೀವಿನಿ ಆಶಯದಂತೆ ಪ್ರತಿಯೊಂದು ಗ್ರಾಮೀಣ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪಶುಸಖಿಯರು ಸಂಬಂಧಪಟ್ಟ ಇಲಾಖೆಗಳ ಜೊತೆಗೆ ಕೈ ಜೋಡಿಸಬೇಕು ಎಂದರು.
ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ. ಹೆಚ್ ಎನ್ ಸಂದೀಪ್ ಕುಮಾರ್, ಡಾ. ಪ್ರದೀಪ್ ಕುಮಾರ್, ಜಿಲ್ಲಾ ವ್ಯವಸ್ಥಾಪಕಿ ಡಾ. ಸೌಮ್ಯ ಕುಮಾರಿ, ರುಡ್ಸೆಟ್ ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್ ಉಪಸ್ಥಿತರಿದ್ದರು. ಪಶುಸಖಿ ಜ್ಯೋತಿ ಚೇರ್ಕಾಡಿ ಹಾಡಿನ ಮೂಲಕ ತರಬೇತಿ ಅನುಭವ ಹಂಚಿಕೊಂಡರು. ವೈದ್ಯಾಧಿಕಾರಿ ಡಾ. ಧನುಷ್ ಕಾರ್ಯಕ್ರಮ ನಿರೂಪಿಸಿದರು. ಪಶು ವೈದ್ಯಾಧಿಕಾರಿ ಡಾ. ಮಂಜುನಾಥ್ ಅಡಿಗ ವಂದಿಸಿದರು.