ಕಾರ್ಕಳ, ಡಿ.7: ಕ್ರೀಡೆಯು ವ್ಯಕ್ತಿಯ ಆರೋಗ್ಯವನ್ನು ವೃದ್ಧಿಸುತ್ತದೆ. ಎಲ್ಲಾ ಭಾಗ್ಯಕ್ಕಿಂತಲೂ ಆರೋಗ್ಯ ಭಾಗ್ಯ ಮಿಗಿಲು ಎಂದು ಕಾರ್ಕಳ ಡಿವೈಎಸ್‌ಪಿ ಅರವಿಂದ್ ಕಲುಗುಜಿ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜು ಗಣಿತನಗರ ಹಾಗೂ ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜು ನಾಗಬನ ಕ್ಯಾಂಪಸ್ ಉಡುಪಿ ಜಂಟಿಯಾಗಿ ಕಾರ್ಕಳ ಜ್ಞಾನಸುಧಾ ಕ್ರೀಡಾಂಗಣದಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ಅಮೆಚೂರ್ ಅಸೋಸಿಯೇಶನ್ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಕೆ. ಬಾಲಕೃಷ್ಣ ಅವರು ವಾರ್ಷಿಕ ಕ್ರೀಡಾಕೂಟಕ್ಕೆ ಶುಭಕೋರಿದರು.
ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಹೆಬ್ರಿಯ ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅಮರೇಶ್ ಹೆಗ್ಡೆ ಮಾತನಾಡುತ್ತಾ, ಬದುಕಿನಲ್ಲಿ ಸೋಲು ಗೆಲುವು ಎರಡು ಮುಖ್ಯ. ಮೈದಾನದ ಆಟ ಕೇವಲ ಆಟವಲ್ಲ. ಅದು ಜೀವನದ ಪಾಠ. ಇಲ್ಲಿ ಕಲಿತ ಪಾಠ ನೂರು ಪುಸ್ತಕಗಳನ್ನು ಓದಿದರೂ ಸಿಗಲಿಕ್ಕಿಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ಇಲ್ಲಿ ನಾಯಕರುಗಳು ಹುಟ್ಟುತ್ತಾರೆ. ಆ ನಾಯಕರ ನಾಯಕತ್ವದ ಅಡಿಯಲ್ಲಿ ಸೋಲು ಗೆಲುವಾಗುತ್ತದೆ. ಆದರೂ ಈ ಕ್ಷಣವು ಶಾಶ್ವತವಾದುದಲ್ಲ ಎಂಬುದನ್ನು ಪ್ರತಿಯೊಬ್ಬನು ಅರಿಯ ಬೇಕು ಎಂದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಸಂಸ್ಥೆಯ
ಹಿತೈಷಿಗಳಾದ ತ್ರಿವಿಕ್ರಮ ಕಿಣಿ, ಪಂಚಾಯತ್ ಸದಸ್ಯ ರೆಹಮತುಲ್ಲ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರ್, ಉಡುಪಿ ಜ್ಞಾನಸುಧಾದ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.
ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಬಾಲಕರ ವಿಭಾಗದಲ್ಲಿ ಪ್ರಣಯ್ ಶೆಟ್ಟಿ (ಕಾರ್ಕಳ ಜ್ಞಾನಸುಧಾ), ವಾಂಚಿತ್ ಎಸ್ ಶೆಟ್ಟಿ (ಉಡುಪಿ ಜ್ಞಾನಸುಧಾ), ಬಾಲಕಿಯರ ವಿಭಾಗದಲ್ಲಿ ಸಂಜನಾ ಬೆಸ್ಕೂರ್ ಹಾಗೂ ಸನ್ನಿಧಿ ಪೂಜಾರಿ (ಕಾರ್ಕಳ ಜ್ಞಾನಸುಧಾ), ಮೋಕ್ಞಾ ಎಸ್ ಶೆಟ್ಟಿ (ಉಡುಪಿ ಜ್ಞಾನಸುಧಾ) ತನ್ನದಾಗಿಸಿಕೊಂಡರು. ಆಂಗ್ಲಭಾಷಾ ಉಪನ್ಯಾಸಕಿ ಸಂಗೀತ ಕುಲಾಲ್ ಹಾಗೂ ರಸಾಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲ ಸಾಹಿತ್ಯ ಸ್ವಾಗತಿಸಿ, ಸಂಸ್ಥೆಯ ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ ಹಾಗೂ ಉಡುಪಿ ಜ್ಞಾನಸುಧಾದ ದೈಹಿಕ ಶಿಕ್ಷಣ ನಿರ್ದೇಶಕ ಅರುಣ್ ಕುಮಾರ್ ವಂದಿಸಿದರು.