ಚೆನ್ನೈ, ಡಿ.4: ಮಿಚಾಂಗ್ ಚಂಡಮಾರುತವು ಮಧ್ಯರಾತ್ರಿಯ ಹೊತ್ತಿಗೆ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಅಪ್ಪಳಿಸುವ ಸಾಧ್ಯತೆಯಿದ್ದು ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಎನ್.ಡಿ.ಆರ್.ಎಫ್ ತಂಡಗಳು ರಕ್ಷಣೆಗೆ ಸನ್ನದ್ಧವಾಗಿವೆ. ಪ್ರಸ್ತುತ ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣವಾಗಿರುವ ಮಿಚಾಂಗ್ ಚಂಡಮಾರುತವು ಆಂಧ್ರಪ್ರದೇಶ, ತಮಿಳುನಾಡು ಕರಾವಳಿಯತ್ತ ಅಪ್ಪಳಿಸುತ್ತಿರುವುದರಿಂದ ಚೆನ್ನೈ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ.
ಮಿಚಾಂಗ್ ಚಂಡಮಾರುತ ಡಿಸೆಂಬರ್ 5 ರಂದು ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಇದು ತೀವ್ರ ಚಂಡಮಾರುತವಾಗಿ ಗಂಟೆಗೆ 100 ಕಿಮೀ ವೇಗದಲ್ಲಿ ಅಪ್ಪಳಿಸಲಿದ್ದು, ದಕ್ಷಿಣ ಒಡಿಶಾದ ಬಹುತೇಕ ಭಾಗಗಳಲ್ಲಿ ಮತ್ತು ರಾಜ್ಯದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿಯತ್ತ ಅಪ್ಪಳಿಸುತ್ತಿರುವ ಚಂಡಮಾರುತದ ಪರಿಣಾಮ, ಭಾನುವಾರ ಸಂಜೆಯಿಂದ ಭಾರಿ ಮಳೆಯಾಗುತ್ತಿದ್ದು, ಚೆನ್ನೈ ನಗರ ಮತ್ತು ನೆರೆಯ ಮೂರು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಸೋಮವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ ಚೆನ್ನೈ ನಗರದಲ್ಲಿ ಈಗಾಗಲೇ ಸರಾಸರಿ 12 ಸೆಂ.ಮೀ ಮಳೆ ದಾಖಲಾಗಿದೆ, ಕೆಲವು ಪ್ರದೇಶಗಳಲ್ಲಿ 20 ರಿಂದ 22 ಸೆಂ.ಮೀ ಮಳೆಯಾಗಿದೆ.
ಭಾರೀ ಮಳೆಯಿಂದಾಗಿ 14 ಸುರಂಗ ಮಾರ್ಗಗಳನ್ನು ಮುಚ್ಚಲಾಗಿದೆ ಮತ್ತು ಕನಿಷ್ಠ ಆರು ಸ್ಥಳಗಳಲ್ಲಿ ಮರಗಳು ಬಿದ್ದು ಹಾನಿಯಾಗಿದೆ ಎಂದು ಗ್ರೇಟರ್ ಚೆನ್ನೈ ಪೊಲೀಸರು ತಿಳಿಸಿದ್ದಾರೆ. ಭಾರೀ ಮಳೆಯ ಪರಿಣಾಮವಾಗಿ ಇಂದು ಚೆನ್ನೈ ಮತ್ತು ಪಕ್ಕದ ಮೂರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿತ್ತು. ನಿರಂತರ ಮಳೆಯಿಂದಾಗಿ ಮದ್ರಾಸ್ ಹೈಕೋರ್ಟ್ ಇಂದು ಚೆನ್ನೈನ ಎಲ್ಲಾ ನ್ಯಾಯಾಲಯಗಳಿಗೆ ರಜೆ ಘೋಷಿಸಿತ್ತು. ಚೆನ್ನೈನ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ಕಾರುಗಳು ನೀರಿನಲ್ಲಿ ತೇಲುತ್ತಿರುವ ದೃಶ್ಯ ಕಂಡು ಬಂದಿತು.
ನಗರದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ಸೇವೆಗಳು ಅಸ್ತವ್ಯಸ್ತವಾಗಿವೆ. ಧಾರಾಕಾರ ಮಳೆಯಿಂದಾಗಿ ಕೊಯಮತ್ತೂರು ಮತ್ತು ಮೈಸೂರಿಗೆ ಹೋಗುವ ರೈಲುಗಳು ಸೇರಿದಂತೆ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ಆರು ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಚೆನ್ನೈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು ಮತ್ತು ಭಾರಿ ಮಳೆಯಿಂದಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ಹೊರಡುವ 70 ವಿಮಾನಗಳನ್ನು ರದ್ದುಗೊಳಿಸಲಾಗಿದೆ.