ಮಂಗಳೂರು, ಡಿ.2: ರಾಮಕೃಷ್ಣ ಮಿಷನ್ ಮಂಗಳೂರು ಇದರ ಪ್ರೇರಣೆಯಿಂದ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್, ಜೆಪ್ಪು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಇದರ ಸಹಯೋಗದಲ್ಲಿ ‘ನಮ್ಮ ಊರು – ನಮ್ಮ ಹೆಮ್ಮೆ’ ಎಂಬ ಕಾರ್ಯಕ್ರಮಕ್ಕೆ ಮಂಗಳಾದೇವಿ ಪ್ರದೇಶದ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗಳನ್ನು ಗೌರವಿಸುವ ಮೂಲಕ ಚಾಲನೆ ನೀಡಲಾಯಿತು. ಜಪ್ಪು ಪರಿಸರದ ಸುಮಾರು 800 ಮನೆಗಳಿಗೆ ಕರಪತ್ರ ಹಂಚುವ ಮೂಲಕ ‘ಸ್ವಚ್ಛತಾ ಜಾಗೃತಿ ಅಭಿಯಾನ’ ನಡೆಸಲಾಯಿತು. ನಂತರ ನಡೆದ ‘ಮಾದರಿ ವಾರ್ಡ್ ನತ್ತ – ಸಂಘಸಂಸ್ಥೆಗಳ ಚಿತ್ತ’ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನಡೆದು ಬಂದ ದಾರಿ ಹಾಗೂ ತಮ್ಮ ವಾರ್ಡ್ ಗಳನ್ನು ಮಾದರಿ ವಾರ್ಡ್ ಗಳನ್ನಾಗಿ ಮಾಡಲು ಯೋಜಿಸಿದ ವಿವಿಧ ಚಟುವಟಿಕೆಗಳ ಬಗೆಗೆ ಸಾರ್ವಜನಿಕರಿಗೆ ವಿವರಿಸಲಾಯಿತು.
ಮಂಗಳೂರು ರಾಮಕೃಷ್ಣ ಮಿಷನ್ ನ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ರವರು ಮಾತನಾಡಿ, ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನ ವಿಶೇಷ ಯೋಜನೆಗೆ ಈ ಭಾಗದ ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಕರಿಸುವಂತೆ ಹಾಗೂ ನಗರ ಬೇರೆ ಬೇರೆ ಭಾಗಗಳಲ್ಲಿನ ಸಂಘಸಂಸ್ಥೆಗಳೂ ಸಹ ತಮ್ಮಇತರೆ ಸಾಮಾಜಿಕ ಕಾರ್ಯಗಳ ಜೊತೆ ನಗರದ ಜ್ವಲಂತ ಸಮಸ್ಯೆಗಳನ್ನು ಸುಧಾರಿಸುವ ಕಾರ್ಯಕ್ರಮಗಳನ್ನು ಮಾಡುವಂತೆ ಕರೆ ನೀಡಿದರು.
ಪಾಲಿಕೆಯ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು ರವರಿಗೆ ಸ್ವಚ್ಛತಾ ಜಾಗೃತಿ ಅಭಿಯಾನದ ಪ್ರಾಯೋಗಿಕ ವರದಿಯನ್ನು ಹಸ್ತಾಂತರಿಸಲಾಯಿತು. ಶಾಸಕ ಡಿ.ವೇದವ್ಯಾಸ್ ಕಾಮತ್ ಮಾತನಾಡಿ, ಸೇವಾ ಟ್ರಸ್ಟ್ ನ ಮಾದರಿ ವಾರ್ಡ್ ಯೋಜನೆಗೆ ನಗರ ಪಾಲಿಕೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆಯಿತ್ತರು. ಪಾಲಿಕೆ ಸದಸ್ಯರುಗಳಾದ ಪ್ರೇಮಾನಂದ ಶೆಟ್ಟಿ, ರೇವತಿ ಶ್ಯಾಮ್ ಸುಂದರ್, ಭಾನುಮತಿ, ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಸೀತಾರಾಮ್ ಎ ಮೊದಲಾದವರು ಉಪಸ್ಥಿತರಿದ್ದರು.