ಉಡುಪಿ, ನ.30: ಉಡುಪಿ ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ತನ್ನ 75 ಸಂವತ್ಸರಗಳ ಹೊಸ್ತಿಲಲ್ಲಿ ನಿಂತಿರುವ ಸಂದರ್ಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಅಮೃತ ಸಂಗಮ ಅನ್ನುವ ಪ್ರಾಕ್ತನ ವಿದ್ಯಾರ್ಥಿಗಳ ಸಮಾವೇಶ ಸಮಾರಂಭವನ್ನು ಡಿಸೆಂಬರ್ 23ರ ಶನಿವಾರ ಸಾಂಸ್ಕೃತಿಕ, ಕ್ರೀಡಾ, ಪ್ರತಿಭಾ ಗುರುವಂದನಾ ಕಾರ್ಯಕ್ರಮ, ನಿವೃತ್ತರಿಗೆ ಸನ್ಮಾನ, ಫೇೂಟೊ ಗ್ಯಾಲರಿ ಕಾರ್ಯಕ್ರಮ, ಸಾಂಸ್ಕೃತಿಕ ವೈಭವ ಮುಂತಾದ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಹಲವಾರು ಸಮಿತಿಗಳು ಕಾರ್ಯಪ್ರವೃತ್ತವಾಗಿವೆ. ಈ ಮಾಹಿತಿಯನ್ನು ಹಳೆ ವಿದ್ಯಾರ್ಥಿಗಳಿಗೆ ಮತ್ತು ಸಂಸ್ಥೆಯಲ್ಲಿ ದುಡಿದು ನಿವೃತ್ತರಾದ ಶಿಕ್ಷಕರಿಗೂ ಶಿಕ್ಷಕೇತರ ವರ್ಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಅಮೃತ ಸಂಗಮ ಜಾಹೀರಾತು ಫಲಕ ಬಿಡುಗಡೆ ಕಾರ್ಯಕ್ರಮ ಕಾಲೇಜಿನ ಮಾಧವ ರಕ್ಷಾ ಆಡಳಿತ ಸೌಧ ಆವರಣದಲ್ಲಿ ನಡೆಯಿತು.
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಳೆ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷ ಪ್ರೊ. ಎಂ. ಎಲ್. ಸಾಮಗ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮಿನಾರಾಯಣ ಕಾರಂತ, ಪದವಿಪೂರ್ವ ಪ್ರಾಂಶುಪಾಲೆ ಮಾಲತಿದೇವಿ, ನಿವೃತ್ತ ಪ್ರಾಂಶುಪಾಲೆ ಡಾ.ಸಂಧ್ಯಾ ನಂಬಿಯಾರ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ.ಎಂ.ವಿಶ್ವನಾಥ ಪೈ, ವಿವಿಧ ಸಮಿತಿಗಳ ಸದಸ್ಯರುಗಳಾದ ರಾಮದಾಸ್ ಪೈ, ರಾಘವೇಂದ್ರ ಕಿಣಿ, ಸಬಿತಾದೇವಿ, ಸುಮಿತ್ರಾ, ಪ್ರೊ.ವಿಠಲದಾಸ ಭಟ್, ರಾಜಾರಾಂ ರಾವ್, ಭುಜಂಗೇಶ್ ಕಾಮತ್, ರಮೇಶ್ ರಾವ್ ಉಪಸ್ಥಿತರಿದ್ದರು.