ಉಡುಪಿ: ನ.30: ಮೌಲ್ಯಯುತ ಶಿಕ್ಷಣ ನೀಡುವ ಜ್ಞಾನಸುಧಾದ ಸಾಧನೆ ಅನುಕರಣೀಯ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ದಕ್ಷತೆಯನ್ನು ಪಡೆಯುವುದರ ಜೊತೆಗೆ ಗಳಿಸಿದ ಶಿಕ್ಷಣ ಪರಿಣಾಮಕಾರಿಯಾಗಬೇಕು. ಅದಕ್ಕಾಗಿ ವಿದ್ಯಾರ್ಥಿಗಳ ಪರಿಶ್ರಮ ಅತೀ ಮುಖ್ಯ. ಅವಕಾಶಗಳಿಗಾಗಿ ಹುಡುಕಾಡದೆ ನಾವೇ ಅವಕಾಶಗಳ ಸೃಷ್ಟಿಕರ್ತರಾಗಬೇಕು. ದುಡ್ಡಿಲ್ಲದವರು ಬಡವರಲ್ಲ, ಕನಸುಗಳೇ ಇಲ್ಲದವರು ನಿಜಕ್ಕೂ ಬಡವರು. ಪ್ರಾಪಂಚಿಕ ಜೀವನದಲ್ಲಿ ಹೊಸತನ್ನು ಕಂಡುಹಿಡಿಯುವ ಪ್ರಯತ್ನ ನಮ್ಮದಾಗಬೇಕು ಎಂದು ತ್ರಿಷಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಮತ್ತು ಸಿ.ಇ.ಒ. ಆಗಿರುವ ಸಿ.ಎ.ಗೋಪಾಲಕೃಷ್ಣ ಭಟ್ ಅಭಿಪ್ರಾಯಪಟ್ಟರು. ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಜ್ಞಾನಸಂಭ್ರಮ’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜು ತನ್ನ ಪ್ರಥಮ ವರ್ಷದಲ್ಲೇ 15 ವಿದ್ಯಾರ್ಥಿಗಳನ್ನು ಎಂ.ಬಿ.ಬಿ.ಎಸ್.ಗೆ ಕಳುಹಿಸಿತು. ಈ ಬ್ಯಾಚ್‌ನ ಅಥಿರಾ ಕೃಷ್ಣ ನಾಯಕ್ ಎಂಬ ವಿದ್ಯಾರ್ಥಿನಿ ಐ.ಐ.ಟಿ.ಗೆ ಪ್ರವೇಶ ಗಿಟ್ಟಿಸಿಕೊಂಡಳು ಈ ಮೂಲಕ ಸಂಸ್ಥೆ ತಮ್ಮ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆಯಲಾಯಿತು. ಜ್ಞಾನಸುಧಾ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿ ಸಮಾಜದ ಬಗ್ಗೆ ಕಾಳಜಿ ಮೂಡುವಂತೆ ಮಾಡಬೇಕು. ಅವರು ತಮ್ಮ ಔದ್ಯೋಗಿಕ ಜೀವನದಲ್ಲಿ ದುಡಿಮೆಯ ಒಂದು ಪಾಲನ್ನು ಅಶಕ್ತರ ಶ್ರೇಯಸ್ಸಿಗಾಗಿ ಮೀಸಲಿರಿಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಹೇಳಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ಹಾಗೂ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ ಕೊಡವೂರು, ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲ ಸಂತೋಷ್, ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಯು., ಡೀನ್ ಸ್ಟೂಡೆಂಟ್ ಅಫರ‍್ಸ್ ಶಕುಂತಲ ಎಂ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಗಣೇಶ್ ಶೆಟ್ಟಿ ವರದಿ ವಾಚಿಸಿದರು. ಉಪನ್ಯಾಸಕರಾದ ಲತಾ ಶೆಟ್ಟಿ ಶೈಕ್ಷಣಿಕ ಸಾಧಕರ, ಜೋತ್ಸ್ನ ಸಾಂಸ್ಕೃತಿಕ ಸಾಧಕರ ಪಟ್ಟಿ ವಾಚಿಸಿದರು. ಉಪಪ್ರಾಂಶುಪಾಲ ಸಂತೋಷ್ ಸ್ವಾಗತಿಸಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ನಿಶ್ಮಿತಾ ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.