ಬ್ರಹ್ಮಾವರ, ನ.27: ಭಾರತೀಯ ಪರಂಪರೆ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವಿದ್ದು, ದೇವರ ಸ್ಪರೂಪವಾಗಿ ಗೋಮಾತೆ ಇಂದು ಜನರ ಭಾವನೆಯಲ್ಲಿ ಹಾಸುಹೊಕ್ಕಾಗಿದೆ. ಇಂತಹ ಗೋಮಾತೆಯ ಹಸಿವು ತಣಿಸುವ ಕೈಂಕರ್ಯ ಗೋವಿಗಾಗಿ ಮೇವು ಕಾರ್ಯಕ್ರಮ ಆಯೋಜನೆ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿದ ಶ್ರೀ ವಿನಾಯಕ ಯುವಕ ಮಂಡಲದ ಕಾರ್ಯ ಇತರರಿಗೆ ಮಾದರಿ ಎಂದು ಗೋವಿಗಾಗಿ ಮೇವು ಕಾರ್ಯಕ್ರಮದ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಹೇಳಿದರು. ಅವರು ಶ್ರೀ ವಿನಾಯಕ ಯುವಕ ಮಂಡಲ(ರಿ) ಸಾಯ್ಬ್ರಕಟ್ಟೆ ವತಿಯಿಂದ ನಡೆದ ಗೋವಿಗಾಗಿ ಮೇವು ಕಾರ್ಯಕ್ರಮದ ಅಂಗವಾಗಿ ನೀಲಾವರದ ಗೋಶಾಲೆಗೆ ಮೂರು ಲೋಡ್ ಹುಲ್ಲು ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಯುವಕ ಮಂಡಲದ ಅಧ್ಯಕ್ಷ ಅಮೃತ್ ಪೂಜಾರಿ ಮಾತನಾಡಿ, ಸಮಾಜಮುಖಿ ಚಿಂತನೆಗಳು ಯುವಕ ಮಂಡಲದ ಧ್ಯೇಯವಾಗಿರಬೇಕು ಎನ್ನುವ ಉದ್ದೇಶದಿಂದ ಗೋವಿಗಾಗಿ ಮೇವು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದರು. ಯುವಕ ಮಂಡಲದ ಕಾರ್ಯದರ್ಶಿ ಗಿರೀಶ್ ಹಾಗೂ ಸದಸ್ಯರು, ನೀಲಾವರ ಗೋಶಾಲೆಯ ಮೇಲ್ವಿಚಾರಕ ಶ್ರೀಕಿರಣ್ ಉಪಸ್ಥಿತರಿದ್ದರು.