ಮಲ್ಪೆ, ನ.27: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ನೆಹರೂ ಯುವ ಕೇಂದ್ರ ಉಡುಪಿ ಹಾಗೂ ಚೈತನ್ಯ ಯುವಕ ಮಂಡಲ (ರಿ) ನೀಲಾವರ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಾಮಾಜಿಕ ಚಿಂತಕ ಮುಷ್ತಾಕ್ ಹೆನ್ನಾಬೈಲ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದಲ್ಲಿ ಸಂವಿಧಾನ ರಚನೆಯಾಗಿ ಅನುಷ್ಠಾನಗೊಂಡಿದ್ದರಿಂದಲೇ ಪ್ರಜಾತಂತ್ರ ಮತ್ತು ಮಾನವೀಯ ಮೌಲ್ಯಗಳು ಸಾಕಾರಗೊಂಡಿದೆ. ಪ್ರಾಚೀನ ಕಾಲದಲ್ಲಿ ಸಮಾಜದ ಸರ್ವರನ್ನೂ ಸಮಾನವಾಗಿ ಕಾಣುವ ವ್ಯವಸ್ಥೆಯಿರಲಿಲ್ಲ. ಹಾಗಾಗಿ ಅತಿಯಾದ ಜಾತೀಯತೆ, ಧರ್ಮಾಂಧತೆಯಿಂದಾಗಿ ನಮ್ಮ ಸಮಾಜ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ಇಂದು ಸಂವಿಧಾನದಿಂದಾಗಿ ವ್ಯವಸ್ಥಿತ ಪ್ರಶಾಸನದ ಜೊತೆಗೆ ಸರ್ವರಿಗೂ ನಮ್ಮ ಬದುಕನ್ನು ಕಟ್ಟಿಕೊಳ್ಳುವ ಹಕ್ಕುಗಳು ದೊರೆತಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ಸಂವಿಧಾನದ ಅರಿವು ಮತ್ತು ಸಂವಿಧಾನ ಬದ್ಧ ನಡತೆ ನಾಗರಿಕ ಜವಾಬ್ದಾರಿ ಮತ್ತು ಸಂವಿಧಾನ ಪ್ರಜ್ಞೆಯನ್ನು ಯುವಜನತೆ ಬೆಳೆಸಿಕೊಳ್ಳಬೇಕೆಂದು ಕರೆಯಿತ್ತರು. ಮುಖ್ಯ ಅತಿಥಿ ತೆಂಕನಿಡಿಯೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಶುಭ ಹಾರೈಸಿದರು. ಕಾರ್ಯಕ್ರಮ ಆಯೋಜಿಸಿದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ ಎನ್. ಪ್ರಾಸ್ತಾವಿಕ ಮಾತುಗಳಲ್ಲಿ ಕಾರ್ಯಕ್ರಮದ ಔಚಿತ್ಯ ತಿಳಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಮಾಜಕಾರ್ಯ ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್, ಶೈಕ್ಷಣಿಕ ಸಲಹೆಗಾರ ಡಾ. ಪ್ರಸಾದ್ ರಾವ್ ಎಂ., ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಧಾಕೃಷ್ಣ, ವಾಣಿಜ್ಯಶಾಸ್ತ್ರ ಸಹಪ್ರಾಧ್ಯಾಪಕ ಡಾ. ಉದಯ ಶೆಟ್ಟಿ ಕೆ., ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸ್ನಾತಕೋತ್ತರ, ಸ್ನಾತಕ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.