ಕಾರ್ಕಳ, ನ.24: ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 9ನೇ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿ ಅನಿಲ್ ಕುಮಾರ್ ಜೈನ್ ಮಾತನಾಡಿ, ಆತಿಥೇಯ ಬಂಗ್ಲೆಗುಡ್ಡೆಯ ಸ. ಕಿ. ಪ್ರಾ. ಶಾಲೆಯು ಮಾದರಿ ಶಾಲೆಯೆನಿಸಿ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ಶಿಕ್ಷಕರ ಅಭಾವ ಬಂದರೂ ಶಾಲೆ ನಿಭಾಯಿಸುವ ಮಟ್ಟಿಗೆ ನಿಧಿ ಸಂಗ್ರಹಿಸಿಡುವ ಹೊಸ ಆಲೋಚನೆಯಲ್ಲಿ ಮೊದಲ ದೇಣಿಗೆಯಾಗಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಒಂದು ಲಕ್ಷ ರೂ. ನೀಡುವ ನಿರ್ಧಾರಕ್ಕೆ ಬಂದಿದೆ. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಶಾಲೆಯ ಹಳೆ ವಿದ್ಯಾರ್ಥಿ ಸಂಘ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಈ ಯೋಜನೆಯನ್ನು ಯಶಸ್ವಿಗೊಳಿಸುವ ಪ್ರಯತ್ನ ಮಾಡಬೇಕು ಎಂದರು.
ಜ್ಞಾನಸುಧಾ ಹಿತೈಷಿ ಹಾಗೂ ಕುಕ್ಕುಂದೂರಿನ ಉದ್ಯಮಿಗಳಾದ ತ್ರಿವಿಕ್ರಮ ಕಿಣಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಓದಿ ಕೆಲಸ ಗಿಟ್ಟಿಸುವ ಎಲ್ಲಾ ಹಳೆ ವಿದ್ಯಾರ್ಥಿಗಳು ತಮ್ಮ ಮೊದಲ ವೇತನವನ್ನು ತಾವು ಓದಿದ ಕನ್ನಡ ಮಾಧ್ಯಮ ಶಾಲೆಗೆ ಮೀಸಲಿಟ್ಟರೆ ಕನ್ನಡ ಮಾಧ್ಯಮ ಶಾಲೆಗಳಿಗೆ ಯಾವತ್ತೂ ದುರ್ಗತಿ ಬರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ಹಾಗೂ ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರು ಸಂಸ್ಥೆಯ ವಿದ್ಯಾರ್ಥಿಗಳಿಗೆ ಉತ್ತಮ ಆತಿಥ್ಯ ಮಾಡಿದ ಶಾಲೆಯ ಆಡಳಿತ ಮಂಡಳಿ ಹಾಗೂ ಊರಿನ ನಾಗರಿಕರಿಗೆ ಕೃತಜ್ಞತೆ ತಿಳಿಸಿ ವಿದ್ಯಾರ್ಥಿಗಳ ಜೀವಮಾನದಲ್ಲಿ ಮರೆಯದ ಅನುಭವ ಕಟ್ಟಿಕೊಡುವ ಈ ಶಿಬಿರದ ಸ್ಥಳ ಹಾಗೂ ಜನರನ್ನು ಮರೆಯಬೇಡಿ ಎಂದರು. ಅಲ್ಲದೆ ಶಾಲಾ ನಿಧಿಗೆ ಎರಡನೇ ದೇಣಿಗೆಯಾಗಿ ಹತ್ತು ಸಾವಿರ ರೂ.ಗಳ ಮೊತ್ತವನ್ನು ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಕೊಡಲಾಗುತ್ತಿದೆ ಎಂದರು.
ಆತಿಥೇಯ ಶಾಲೆಯ ನಿಕಟಪೂರ್ವ ಮುಖ್ಯೋಪಾಧ್ಯಾಯರು ಹಾಗೂ ಪ್ರಸ್ತುತ ಮಿಯ್ಯಾರು ಸ. ಹಿ.ಪ್ರಾ. ಶಾಲೆಯ ರಾಜ್ಯ ಪ್ರಶಸ್ತಿ ವಿಜೇತ ಮುಖ್ಯೋಪಾಧ್ಯಾಯರಾದ ಸಂಜೀವ ದೇವಾಡಿಗ ಮಾತನಾಡಿ, ಆತಿಥೇಯ ಶಾಲೆಯು ಜಿಲ್ಲೆಯಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನೊಳಗೊಂಡ ಹೆಮ್ಮೆಯ ಶಾಲೆ ಬಂಗ್ಲೆಗುಡ್ಡೆ ಶಾಲೆ ಎಂದರು. ಈ ಸಂದರ್ಭದಲ್ಲಿ ಶಿಬಿರದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಮನಿತ್, ಸುವೀಕ್ಷಾ, ಸ್ಟೀವ್ ಪಿಂಟೊ ಮತ್ತುಅಭಿಷ್ ಜೈನ್ ಉತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದರು. ಕೆರ್ವಾಶೆ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ಸುನಿಲ್ ಶೆಟ್ಟಿ, ಸ. ಕಿ. ಪ್ರಾ. ಶಾಲೆ ಬಂಗ್ಲೆಗುಡ್ಡೆ ಕೆರ್ವಾಶೆಯ ಮುಖ್ಯೋಪಾಧ್ಯಾಯರಾದ ಸುನೀತಾ ನಾಯಕ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಯು., ಸ. ಕಿ. ಪ್ರಾ. ಶಾಲೆ ಬಂಗ್ಲೆಗುಡ್ಡೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಜಯಾನಂದ ಪೂಜಾರಿ, ಉಪಾಧ್ಯಕ್ಷರಾದ ಸರಸ್ವತಿ ಆಚಾರ್ಯ, ಕಾರ್ಕಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉಮೇಶ್, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಡಾ. ಹರಿಪ್ರಸಾದ್, ಕೆರ್ವಾಶೆ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾದ ಧರ್ಮರಾಜ ಹೆಗ್ಡೆ ವೇದಿಕೆಯಲ್ಲಿದ್ದರು.
ಎಸ್.ಡಿ.ಎಂ.ಸಿ.ಯ ಶಿಕ್ಷಣ ತಜ್ಞ ರಾಮ ಸೇರ್ವೆಗಾರ್, ಸ. ಕಿ. ಪ್ರಾ. ಶಾಲೆ ಬಂಗ್ಲೆಗುಡ್ಡೆ ಕೆರ್ವಾಶೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸ್ವಾತಿ ವಿವೇಕ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ನಿರೂಪಿಸಿ, ಕಾರ್ಯಕ್ರಮಾಧಿಕಾರಿ ರವಿ ಜಿ ವಂದಿಸಿದರು.