ಉಡುಪಿ, ನ.23: ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ರಕ್ತಹೀನತೆ ಹಾಗೂ ಅಪೌಷ್ಠಿಕತೆ ಕಂಡುಬರುತ್ತಿದ್ದು, ಇದರ ನಿರ್ಮೂಲನೆಗೊಳಿಸುವ ಉದ್ದೇಶದಿಂದ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಅಭಿಯಾನದಡಿ ಮೊದಲ ಹಂತದಲ್ಲಿ ಜಿಲ್ಲೆಯ ಒಂದರಿಂದ ಪದವಿಪೂರ್ವ ಕಾಲೇಜು ವರೆಗಿನ ಮಕ್ಕಳಲ್ಲಿ ಕಂಡುಬರುವ ರಕ್ತಹೀನತೆ ಹಾಗೂ ಅಪೌಷ್ಠಿಕತೆಯನ್ನು ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ ಪಡೆಯಲು ಸಲಹೆ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು. ಅವರು ಗುರುವಾರ ನಗರದ ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ ಹೈಸ್ಕೂಲ್) ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅನೀಮಿಯಾ ಹಾಗೂ ಅಪೌಷ್ಠಿಕತೆ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಅನೀಮಿಯಾದಿಂದ ಮಕ್ಕಳಿಗೆ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಗರ್ಭಿಣಿಯರಲ್ಲಿ ರಕ್ತಹೀನತೆ ಯಿಂದಾಗಿ ತಾಯಿ ಹಾಗೂ ಮಗು ಮರಣ ಸಂಭವಿಸುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರೂ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದರು.
ಶಾಲಾ- ಕಾಲೇಜುಗಳಲ್ಲಿ ಅನೀಮಿಯಾ ಹಾಗೂ ಅಪೌಷ್ಠಿತೆ ಕುರಿತು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಇಲ್ಲಿ ನೀಡಿದ ಮಾಹಿತಿಯನ್ನು ವಿದ್ಯಾರ್ಥಿಗಳ ತಮ್ಮ ಕುಟುಂಬ ಸದಸ್ಯರ ಜೊತೆ ಹಂಚಿಕೊಳ್ಳಬೇಕು. ಮಕ್ಕಳು ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡಿ, ಪೌಷ್ಠಿಕ ಆಹಾರವನ್ನು ಬಳಸುವ ಕುರಿತು ಗಮನ ಹರಿಸಬೇಕು. ಹೆಣ್ಣು ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಾಗಿ ಕಂಡುಬರುವುದರಿಂದ ಅವರುಗಳು ಹಸಿ ತರಕಾರಿ, ಸೊಪ್ಪು, ಮೊಳಕೆ ಕಾಳುಗಳು ಸೇರಿದಂತೆ ಇನ್ನಿತರ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾದ್ ಮಾತನಾಡಿ, ರೋಗವು ಗಂಭೀರ ಹಂತವನ್ನು ತಲುಪುವುದಕ್ಕಿಂತ ಮೊದಲು, ರೋಗ ಮೊದಲ ಹಂತದಲ್ಲಿದ್ದಾಗಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಉತ್ತಮ ಆರೋಗ್ಯ ಹೊಂದ ಬಹುದಾಗಿದೆ. ಸದೃಢ ಆರೋಗ್ಯ ಹೊಂದಿದ ಮಕ್ಕಳಿಂದ ಸದೃಢ ರಾಷ್ಟ್ರನಿರ್ಮಾಣ ಸಾಧ್ಯ. ಅಭಿಯಾನದಲ್ಲಿ ಅನೀಮಿಯಾ ಹಾಗೂ ಅಪೌಷ್ಠಿಕತೆ ಇರುವ ಮಕ್ಕಳನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ ಉಡುಪಿ ಜಿಲ್ಲೆಯನ್ನು ಅಪೌಷ್ಠಿಕ ಮತ್ತು ಅನೀಮಿಯಾ ಮುಕ್ತ ಪೌಷ್ಠಿಕ ಜಿಲ್ಲೆಯಾಗಿಸಲು ಪ್ರಯತ್ನಿಸೋಣ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನೀಮಿಯಾ ಹಾಗೂ ಅಪೌಷ್ಠಿಕತೆ ಕುರಿತು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಪಾಸಣೆ ನಡೆಸಿ, ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಮಂಜುನಾಥ್ ಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ನಿರೂಪಣಾ ಅಧಿಕಾರಿ ಬಿ.ಹೆಚ್ ಕೃಷ್ಣಪ್ಪ, ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಆರೋಗ್ಯ ಶಿಕ್ಷಣ ಅಧಿಕಾರಿ ಚಂದ್ರಕಲಾ ನಿರೂಪಿಸಿದರೆ, ಕಾಲೇಜಿನ ಪ್ರಾಂಶುಪಾಲೆ ಲೀಲಾ ಭಟ್ ವಂದಿಸಿದರು.