ಉಡುಪಿ, ನ.23: ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ) ಹೆಬ್ರಿ ಪ್ರಾಯೋಜಿತ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ನೀಡುವ ‘ಶಾರದಾ ಕೃಷ್ಣ’ ಪ್ರಶಸ್ತಿಗೆ ಈ ಬಾರಿ ಕನ್ನಡದ ಶ್ರೇಷ್ಠ ಹಿರಿಯ ಕಲಾವಿದ, ನಿರ್ದೇಶಕ, ಸಂಘಟಕ , ಚಲನಚಿತ್ರ ನಟ ಕಾಸರಗೋಡು ಚಿನ್ನಾ ಅವರು ಆಯ್ಕೆಯಾಗಿದ್ದಾರೆ. ಜನವರಿ ತಿಂಗಳಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪತ್ರ, ಫಲಕ ಹಾಗೂ ರೂಪಾಯಿ 25,000 ನಗದಿನೊಂದಿಗೆ ಗೌರವಿಸಲಾಗುವುದು ಎಂದು ಪ್ರಶಸ್ತಿಯ ಸಂಚಾಲಕರಾದ ವಿವೇಕಾನಂದ ಎನ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಸರಗೋಡು ಚಿನ್ನಾ: ಕನ್ನಡದ ಗಡಿನಾಡು ಕಾಸರಗೋಡಿನ ಶ್ರೀನಿವಾಸ ರಾವ್ ಎಸ್ ಅವರು ಕಾಸರಗೋಡು ಚಿನ್ನಾ ಎಂದೇ ಪರಿಚಿತರು. ತಮ್ಮ ಬಿ.ಎ ವಿದ್ಯಾಭ್ಯಾಸವನ್ನು ಮುಗಿಸಿ, ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಡಿಪ್ಲೋಮೋ ದಲ್ಲಿ ಚಿನ್ನದ ಪದಕವನ್ನು ಪಡೆದ ಚಿನ್ನಾ ಅವರು ಸಂಘಟಕರಾಗಿ, ನಟನಾಗಿ, ರಂಗ ನಿರ್ದೇಶಕರಾಗಿ, ಚಲನಚಿತ್ರ ನಿರ್ದೇಶಕರಾಗಿ ಚಿರಪರಿಚಿತರು.
ಕನ್ನಡ, ತುಳು, ಕೊಂಕಣಿ, ಮಲಯಾಳಂ, ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿ ನಾಟಕಗಳನ್ನು ನಿರ್ದೇಶಿಸಿ, ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರು, ಗೌರವಾಧ್ಯಕ್ಷರು, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಂಗ ಚಿನ್ನಾರಿ ಎಂಬ ಸಂಸ್ಥೆಯನ್ನು ಕಟ್ಟಿ, ಹಲವು ಕನ್ನಡದ ಕೆಲಸಗಳನ್ನು ನಿರಂತರವಾಗಿ ಕಾಸರಗೋಡು ಪರಿಸರದಲ್ಲಿ ನಡೆಸುತ್ತಿದ್ದಾರೆ. ಹಲವು ಕೃತಿಗಳನ್ನು ಕನ್ನಡದಿಂದ ಮಲಯಾಳಂಗೆ, ಮಲಯಾಳಂದಿಂದ ತುಳು, ಕೊಂಕಣಿ ಹಾಗೂ ಕನ್ನಡಕ್ಕೆ ಅನುವಾದ ಮಾಡಿದ್ದು ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.
ಸುಮಾರು ನೂರಕ್ಕೂ ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಈ ಸೇವೆ, ಸಾಧನೆಗೆ, ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳ ಪ್ರಶಸ್ತಿಗಳು ಬಂದಿರುತ್ತದೆ.