ಮಲ್ಪೆ, ನ.20: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಗ್ರಂಥಾಲಯ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಭಾಗವಹಿಸಿದ ಚಿತ್ರದುರ್ಗ ಇಂಡಿಯಾನಾ ಅಸ್ಪತ್ರೆಯ ಮುಖ್ಯ ಕಾರ್ಯನಿರ್ವಹಾಣಾಧಿಕಾರಿ ರೂಪೇಶ್ ಶೆಟ್ಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಭಿನ್ನ ಯೋಚನೆ ಮತ್ತು ವಿರಳವಾಗಿ ಕ್ರಮಿಸಿದ ಮಾರ್ಗವನ್ನು ಅಯ್ಕೆ ಮಾಡಿಕೊಂಡಲ್ಲಿ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಈ ನಿಟ್ಟಿನಲ್ಲಿ ಓದುವ ಹವ್ಯಾಸ ನಮ್ಮಲ್ಲಿ ಸೃಜನಶೀಲ ಆಲೋಚನೆಗಳನ್ನು ಹುಟ್ಟುಹಾಕಬಲ್ಲದು. ಅದೆಷ್ಟೊ ಆದರ್ಶ ವ್ಯಕ್ತಿಗಳಲ್ಲಿ ಒಂದು ಪುಸ್ತಕದ ಓದು ಬದುಕಿನ ದಿಕ್ಕನ್ನೇ ಬದಲಾಯಿಸಿದ ಉದಾಹರಣೆಗಳಿವೆ. ಜೊತೆಗೆ ಇಂದಿನ ಡಿಜಿಟಲ್ ಯುಗದಲ್ಲೂ ಪುಸ್ತಕಗಳ ಮಹತ್ವ ಮೌಲ್ಯವೇನೂ ಕಡಿಮೆಯಾಗಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ಮಾತನಾಡುತ್ತಾ, ಯುವಜನತೆಯಲ್ಲಿ ಸ್ವತಂತ್ರ ಚಿಂತನೆ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಮತ್ತೆ ಯುವಜನತೆಯಲ್ಲಿ ಕ್ರಿಯಾಶೀಲತೆ, ಮಾನವೀಯತೆ ಮತ್ತು ಸೃಜನಶೀಲತೆಯನ್ನು ತರುವಲ್ಲಿ ಪುಸ್ತಕ ಪ್ರೀತಿ ಸಹಕಾರಿ ಎಂದರು. ಕಾಲೇಜಿನ ಐಕ್ಯುಎಸಿ ಸಂಚಾಲಕಿ ಡಾ. ಮೇವಿ ಮಿರಾಂದ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ ನೀಲಾವರ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಿಸಿದ ಗ್ರಂಥಪಾಲಕ ಕೃಷ್ಣ ಸಾಸ್ತಾನ ಗ್ರಂಥಾಲಯ ಸಪ್ತಾಹದ ಅಂಗವಾಗಿ ಪುಸ್ತಕ ಪ್ರದರ್ಶನ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಪದಜೋಡಣೆ ಹಾಗೂ ಪುಸ್ತಕ ಓದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಉಪಸ್ಥಿತರಿದ್ದರು. ರೂಪೇಶ್ ಶೆಟ್ಟಿ ಗ್ರಂಥಾಲಯಕ್ಕೆ ಕಂಪ್ಯೂಟರ್ನ್ನು ದೇಣಿಗೆಯಾಗಿ ನೀಡಿದರು. ಗ್ರಂಥಾಲಯ ಸಹಾಯಕಿಯರಾದ ಸುನೀತಾ ಮತ್ತು ಪ್ರಮೀಳಾ, ಬೋಧಕ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.