ಉಡುಪಿ, ನ. 17: ನಮ್ಮ ನಿತ್ಯ ಬದುಕಿನಲ್ಲಿ ಜವಾಬ್ದಾರಿಯುತವಾಗಿ ಶಿಸ್ತು ಮತ್ತು ಸನ್ನಡತೆ ಪ್ರದರ್ಶಿಸಿದರೆ ಅದು ವೈಯಕ್ತಿಕ ನೆಲೆಯಲ್ಲಿ ದೇಶ ಸೇವೆ ನಡೆಸಿದಂತೆ ಎಂದು ಕೆರ್ವಾಶೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಹಾಗೂ ಭಾರತೀಯ ವಾಯುಸೇನೆಯ ನಿವೃತ್ತ ಯೋಧರಾದ ರಮೇಶ್ ಕಾರ್ಣಿಕ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ವತಿಯಿಂದ ಸರಕಾರಿ ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಕೆರ್ವಾಶೆಯಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.
ದಿಕ್ಸೂಚಿ ಭಾಷಣಗೈದ ಎಸ್.ವಿ.ಟಿ. ಪ.ಪೂ. ಕಾಲೇಜಿನ ಆಂಗ್ಲ ಭಾಷಾ ಶಿಕ್ಷಕರಾದ ಸುನಿಲ್ ಶೆಟ್ಟಿ ಇವರು ಎನ್.ಎಸ್.ಎಸ್.ನ ಪ್ರಾಮುಖ್ಯತೆಯನ್ನು ತಿಳಿಸಿದರು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ, ಕೆರ್ವಾಶೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುನೀತಾ ಪೂಜಾರಿ, ಸ.ಹಿ.ಪ್ರಾ. ಶಾಲೆ ಬಂಗ್ಲೆಗುಡ್ಡೆಯ ಮುಖ್ಯೋಪಾಧ್ಯಾಯರಾದ ಸುನೀತಾ, ಸ.ಹಿ.ಪ್ರಾ.ಶಾಲೆ ಮಿಯಾರಿನ ಮುಖ್ಯ ಶಿಕ್ಷಕರಾದ ಸಂಜೀವ ದೇವಾಡಿಗ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಶಿಕ್ಷಣ ತಜ್ಞರಾದ ರಾಮ ಸೇರ್ವೇಗಾರ್, ಸ.ಹಿ.ಪ್ರಾ. ಶಾಲೆ ಬಂಗ್ಲೆಗುಡ್ಡೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಜಯಾನಂದ ಪೂಜಾರಿ, ಆತಿಥೇಯ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸ್ವಾತಿ ವಿವೇಕ್ ನಾಯಕ್, ಉದ್ಯಮಿಗಳಾದ ತ್ರಿವಿಕ್ರಮ ಕಿಣಿ, ದೇವೇಂದ್ರ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರವಿ ಜಿ. ಸ್ವಾಗತಿಸಿ, ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.