ಮುಂಬಯಿ, ನ. 15: (ಉಡುಪಿ ಬುಲೆಟಿನ್ ವರದಿ) ಇಲ್ಲಿಯ ವಾಂಖೆಡೆ ಸ್ಟೇಡಿಯಮ್ ನಲ್ಲಿ ಬುಧವಾರ ನಡೆದ ಹೈ ವೋಲ್ಟೇಜ್ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 70 ರನ್ ಗಳ ಅಭೂತಪೂರ್ವ ಗೆಲುವನ್ನು ಸಾಧಿಸಿ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸಿತು. ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಬಿರುಸಿನ ಆರಂಭ ಒದಗಿಸಿದರು. ರೋಹಿತ್ ಶರ್ಮಾ ಕೇವಲ 29 ಎಸೆತಗಳಲ್ಲಿ ತಲಾ 4 ಬೌಂಡರಿ ಮತ್ತು ಸಿಕ್ಸರ್ ಸಹಾಯದಿಂದ 47 ರನ್ ಗಳಿಸಿದರು. ಗಿಲ್ ಅಜೇಯ 80 ರನ್ ಗಳಿಸಿದರು.
ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ: ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ಅತಿ ಹೆಚ್ಚಿನ ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದರು. 117 ರನ್ ಗಳಿಸಿದ ಕೊಹ್ಲಿ ಭಾರತ ತಂಡಕ್ಕೆ ಬೃಹತ್ ಮೊತ್ತ ಪೇರಿಸುವಲ್ಲಿ ಮಹತ್ವದ ಕೊಡುಗೆ ನೀಡಿದರು.
ಐಯ್ಯರ್ ಸತತ ಎರಡನೇ ಶತಕ: ಶ್ರೇಯಸ್ ಐಯ್ಯರ್ ಮತ್ತೊಮ್ಮೆ ಶತಕ ಬಾರಿಸಿ ಸಂಭ್ರಮಿಸಿದರು. ಕೇವಲ 70 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 4 ಬೌಂಡರಿ ಸಹಾಯದಿಂದ 105 ರನ್ ಗಳಿಸಿದರು. ಕೊನೆಯ ಹಂತದಲ್ಲಿ ಕೆ.ಎಲ್. ರಾಹುಲ್ ಸ್ಪೋಟಕ ಆಟದ ಸಹಾಯದಿಂದ ಭಾರತ ತಂಡ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 397 ರನ್ ಪೇರಿಸಿತು.
ಬೃಹತ್ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ವೇಗಿ ಮೊಹಮ್ಮದ್ ಶಮಿ ಆರಂಭದಲ್ಲೇ ಆಘಾತ ನೀಡಿದರು. ಬಳಿಕ ಜತೆಗೂಡಿದ ವಿಲಿಯಮ್ಸನ್- ಮಿಶೆಲ್ ಜೋಡಿ ಉತ್ತಮ ಜೊತೆಯಾಟ ನೀಡಿ ಗೆಲುವಿನ ಭರವಸೆ ಮೂಡಿಸಿದರು. ಮಿಶೆಲ್ 134 ರನ್ ಗಳಿಸಿದರೆ, ನಾಯಕ ವಿಲಿಯಮ್ಸನ್ 69 ರನ್ ಗಳಿಸಿದರು.
ಶಮಿ ಮಾರಕ ದಾಳಿ: ಮೊಹಮ್ಮದ್ ಶಮಿ ಈ ವಿಶ್ವಕಪ್ ನಲ್ಲಿ ಮೂರನೇ ಬಾರಿಗೆ 5 ವಿಕೆಟ್ ಗಳ ಗೊಂಚಲು ಪಡೆದರು. ಶಮಿ 7 ವಿಕೆಟ್ ಪಡೆದರು.
ಅಂತಿಮವಾಗಿ ನ್ಯೂಜಿಲೆಂಡ್ 48.5 ಓವರ್ ಗಳಲ್ಲಿ 327 ಕ್ಕೆ ಆಲ್ ಔಟ್ ಆಯ್ತು.