ಮಣಿಪಾಲ, ನ.14: ನಾವು ಸಂರಕ್ಷಿಸಲೇಬೇಕಾದ ನಮಗಿರುವ ಒಂದೇ ಒಂದು ವಾಸಸ್ಥಾನವೆಂದರೆ ಈ ಭೂಮಿ ಎಂದು ಎಡಿನ್‌ಬರೋ ನೇಪಿಯರ್ ವಿಶ್ವವಿದ್ಯಾಲಯದ ಸ್ಕಾಟಿಷ್ ಸೆಂಟರ್ ಫಾರ್ ಟಾಗೋರ್ ಸ್ಟಡೀಸ್‌ನ ನಿರ್ದೇಶಕಿ ಡಾ. ಬಾಶಬಿ ಫ್ರೇಸರ್ ಹೇಳಿದರು. ಯುದ್ಧಗಳು ಮತ್ತು ಮಾನವನ ದುರಾಸೆಗಳು ಈ ಏಕೈಕ ವಾಸಸ್ಥಾನವನ್ನು ನಾಶಪಡಿಸಬಹುದು ಮತ್ತು ನಾವು ಅದರ ವಿರುದ್ಧ ನಿರಂತರವಾಗಿ ಹೋರಾಡಬೇಕಿದೆ ಎಂದು ಅವರು ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಬಾಶಬಿ ಫ್ರೇಸರ್ ಅವರು ಕವಿತೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಭಾರತೀಯ ಮೂಲದ ಇಂಗ್ಲೆಂಡಿನಲ್ಲಿ ನೆಲೆಸಿರುವ ಪ್ರಶಸ್ತಿ ವಿಜೇತ ಕವಿ, ಸಮಕಾಲೀನ ಕಾಲಕ್ಕೆ ಪ್ರತಿಕ್ರಿಯೆಯಾಗಿ ಕಾವ್ಯವು ಹೇಗೆ ಹುಟ್ಟುತ್ತದೆ ಎಂಬುದನ್ನು ವಿವರಿಸಿದರು. ಹೆಬಿಟ್ಯಾಟ್'(ಆವಾಸ) ಅವರ ಇತ್ತೀಚಿನ ಕವನ ಸಂಕಲನ. ಈ ಕವನ ಸಂಕಲನದಿಂದ ಕವಿತೆಗಳನ್ನು ತೆಗೆದುಕೊಂಡು ಅವರು ಅನೇಕ ಯುದ್ಧ-ವಿರೋಧಿ, ಮಾನವ ಪರ, ಪರಿಸರದ ಕವಿತೆಗಳನ್ನು ಓದಿದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಅವರು ಡಾ. ಬಾಶಬಿಯವರ ಕಾವ್ಯದಲ್ಲಿ ಸೌಂದರ್ಯ ಮತ್ತು ರಾಜಕೀಯ ವಿಲೀನಗೊಂಡು ಅವುಗಳನ್ನು ಪರಿಣಾಮಕಾರಿಯಾಗಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಎಡಿನ್‌ಬರೋ ಮಾಜಿ ಪ್ರಾಧ್ಯಾಪಕ ಡಾ. ನೀಲ್ ಫ್ರೇಸರ್ ಉಪಸ್ಥಿತರಿದ್ದರು.