ಬೆಂಗಳೂರು, ನ.12: (ಉಡುಪಿ ಬುಲೆಟಿನ್ ವರದಿ) ಇಲ್ಲಿಯ ಎಮ್ ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ರವಿವಾರ ನಡೆದ ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 160 ರನ್ ಗಳ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ 2023 ರ ಎಲ್ಲಾ ಲೀಗ್ ಪಂದ್ಯಗಳಲ್ಲೂ ದಿಗ್ವಿಜಯ ಸಾಧಿಸಿ ಅಜೇಯ ತಂಡ ಎಂಬ ನೂತನ ದಾಖಲೆ ನಿರ್ಮಿಸಿದೆ.
ಟಾಸ್ ಗೆದ್ದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಜೋಡಿ ಬಿರುಸಿನ ಆರಂಭ ನೀಡಿದರು. ಶತಕದ ಜತೆಯಾಟ ನೀಡಿದ ಈ ಜೋಡಿಯನ್ನು 12ನೇ ಓವರಿನಲ್ಲಿ ಬೇರ್ಪಡಿಸಲು ನೆದರ್ಲ್ಯಾಂಡ್ ತಂಡ ಯಶಸ್ವಿಯಾಯ್ತು. ಕೆಲವೇ ಹೊತ್ತಿನಲ್ಲಿ ಮತ್ತೊಂದು ವಿಕೆಟ್ ಕೂಡ ಪತನವಾಯ್ತು. ರೋಹಿತ್ ಶರ್ಮಾ 61 ರನ್ ಗಳಿಸಿದರೆ, ಗಿಲ್ 51 ಬಾರಿಸಿದರು.
ನಂತರ ಜತೆಗೂಡಿದ ಕೊಹ್ಲಿ ಮತ್ತು ಶ್ರೇಯಸ್ ಐಯ್ಯರ್ ಉತ್ತಮ ಜತೆಯಾಟದ ನಿರೀಕ್ಷೆ ಹುಟ್ಟಿಸಿದರು. ವಿರಾಟ್ ಕೊಹ್ಲಿ 51 ರನ್ ಗಳಿಸಿ ಔಟಾದರು. ಬಳಿಕ ಆಗಮಿಸಿದ ಕೆ.ಎಲ್. ರಾಹುಲ್ ಐಯ್ಯರ್ ಜತೆಗೂಡಿ ರನ್ ರೇಟ್ ಹೆಚ್ಚಿಸುವಲ್ಲಿ ಗಮನ ಹರಿಸಿದರು. 4ನೇ ವಿಕೆಟಿಗೆ 208 ರನ್ ಜತೆಯಾಟ ನೀಡಿದ ಈ ಜೋಡಿ, 400 ರ ಗಡಿ ದಾಟಲು ನೆರವು ನೀಡಿತು. ಐಯ್ಯರ್ ಅಜೇಯ 128 ರನ್ ಗಳಿಸಿದರೆ (10 ಬೌಂಡರಿ, 5 ಸಿಕ್ಸ್), ರಾಹುಲ್ 64 ಎಸೆತಗಳಲ್ಲಿ 102 ರನ್ (11 ಬೌಂಡರಿ, 4 ಸಿಕ್ಸ್) ಗಳಿಸಿದರು. 50 ಓವರ್ ಗಳಲ್ಲಿ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 410 ರನ್ ಪೇರಿಸಿತು.
ಬೃಹತ್ ಗುರಿಯನ್ನು ಬೆನ್ನತ್ತಲು ಪ್ರಯತ್ನಿಸಿದ ನೆದರ್ಲ್ಯಾಂಡ್ ತಂಡಕ್ಕೆ ಸಿರಾಜ್ ಮೊದಲ ಆಘಾತ ನೀಡಿದರು. 47.5 ಓವರ್ ಗಳಲ್ಲಿ ನೆದರ್ಲ್ಯಾಂಡ್ ತಂಡ 250 ಕ್ಕೆ ಆಲ್ ಔಟ್ ಆಯ್ತು. ತೇಜಾ ನಿದಮನುರು 54 ರನ್ ಗಳಿಸಿದರು. ಬುಮ್ರಾ, ಸಿರಾಜ್, ಕುಲದೀಪ್ ಯಾದವ್, ಜಡೇಜಾ ತಲಾ ಎರಡು ವಿಕೆಟ್ ಪಡೆದರು. ವಿಶೇಷವೆಂದರೆ, ಬೌಲಿಂಗ್ ನಡೆಸಲು ಬಂದ ವಿರಾಟ್ ಕೊಹ್ಲಿ 3 ಓವರ್ ಗಳಲ್ಲಿ 13 ರನ್ ನೀಡಿ ಒಂದು ವಿಕೆಟ್ ಪಡೆದರೆ, ನಾಯಕ ರೋಹಿತ್ ಶರ್ಮಾ ಕೂಡ ಒಂದು ವಿಕೆಟ್ ಪಡೆದರು. ಶ್ರೇಯರ್ ಐಯ್ಯರ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
9 ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದ ಭಾರತ ತಂಡ ಅಂಕಪಟ್ಟಿಯಲ್ಲಿ 18 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ದಕ್ಷಿಣ ಆಫ್ರಿಕಾ 14 ಅಂಕಗಳೊಂದಿಗೆ ಎರಡನೆಯ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.