ಕೆಮ್ಮಣ್ಣು, ನ.12: ಮನೆಯೊಂದಕ್ಕೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಇರಿದು ಭೀಕರವಾಗಿ ಹತ್ಯೆಗೈದು ಕೊಲೆಗಡುಕ ಪರಾರಿಯಾದ ಘಟನೆ ಮಲ್ಪೆ ಪೊಲೀಸ್ ಠಾಣೆಯ ಕೆಮ್ಮಣ್ಣು ಹಂಪನಕಟ್ಟೆಯಲ್ಲಿ ನವೆಂಬರ್ 12 ರವಿವಾರ ಮುಂಜಾನೆ ನಡೆದಿದೆ. ಮೂಲಗಳ ಪ್ರಕಾರ ಮಾಸ್ಕ್, ಕಪ್ಪು ಬ್ಯಾಗ್ ಧರಿಸಿದ ಬೋಳು ತಲೆಯ ವ್ಯಕ್ತಿ ಸಂತೆಕಟ್ಟೆಯಿಂದ ಆಟೋದಲ್ಲಿ ಘಟನೆ ನಡೆದ ಸ್ಥಳಕ್ಕೆ ಬಂದಿದ್ದ. ಆಟೋ ಚಾಲಕ ಆತನಿಗೆ ಬಿಟ್ಟು 15 ನಿಮಿಷದೊಳಗೆ ಆತ ಮತ್ತೆ ಸಂತೆಕಟ್ಟೆಗೆ ಮರಳಿದ ಎಂದು ಆಟೋ ಚಾಲಕ ಹೇಳಿದ್ದಾರೆ. 15 ನಿಮಿಷದೊಳಗೆ ಬರುವುದಿದ್ದರೆ ನಾನೇ ಕರೆದುಕೊಂಡು ಬರುತ್ತಿದ್ದೆ ಎಂದು ಆಟೋ ಚಾಲಕ ಆತನಲ್ಲಿ ಹೇಳುವಷ್ಟರಲ್ಲಿ ಮತ್ತೊಂದು ಆಟೋ ಹತ್ತಿದ ಆ ವ್ಯಕ್ತಿ ಅಲ್ಲಿಂದ ಆತುರದಿಂದ ಹೊರಟ. ಅಲ್ಲಿಂದ ಹೊರಟ ವ್ಯಕ್ತಿ ಕರಾವಳಿ ಬೈಪಾಸ್ ನಲ್ಲಿ ಎರಡನೆಯ ಆಟೋದಿಂದ ಇಳಿದ ಎನ್ನಲಾಗಿದೆ. ಆರೋಪಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಕೊಲೆಯಾದವರನ್ನು ಹಸೀನಾ (46), ಅವರ ಮಕ್ಕಳಾದ ಏರ್ ಇಂಡಿಯಾ ಕಂಪನಿ ಉದ್ಯೋಗಿ ಅಫ್ನಾನ್ (23), ಲಾಜಿಸ್ಟಿಕ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಯ್ನಾಜ್ (21), ಉಡುಪಿಯ ಪ್ರೌಢಶಾಲೆಯ ವಿದ್ಯಾರ್ಥಿ ಅಸೀಮ್ (12) ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ ಮತ್ತೋರ್ವ ಮಹಿಳೆಯ ಮೇಲೆಯೂ ಕೊಲೆಗಡುಕ ದಾಳಿ ಮಾಡಿದ್ದು ಅವರಿಗೆ ತೀವ್ರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಸೀನಾ ಅವರ ಪತಿ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಯಶ್ಪಾಲ್ ಸುವರ್ಣ, ಎಸ್.ಪಿ. ಅರುಣ್ ಕುಮಾರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸಾಮಾಜಿಕ ಮುಖಂಡರು ಭೇಟಿ ನೀಡಿದ್ದಾರೆ. ಆರೋಪಿಯ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದ್ದು ವ್ಯಾಪಕ ಶೋಧ ಕಾರ್ಯ ನಡೆಯುತ್ತಿದೆ.