ಮಲ್ಪೆ, ನ.12: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಆಶ್ರಯದಲ್ಲಿ ಓದುಗರ ವೇದಿಕೆಯ ಉದ್ಘಾಟನೆ ಹಾಗೂ ಕುರಿತಾದ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕರಾದ ವೆಂಕಟೇಶ್ ಓದುಗರ ವೇದಿಕೆಯನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಪುಸ್ತಕಗಳನ್ನು ಓದುವ ಹವ್ಯಾಸ ಇಂದಿನ ಯುವಜನತೆಯಲ್ಲಿ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಓದುಗರ ವೇದಿಕೆ ಯುವಜನತೆಯನ್ನು ಗ್ರಂಥಾಲಯ ಕಡೆ ಆಕರ್ಷಿಸುವಲ್ಲಿ ಪ್ರೇರಣೆದಾಯಕ. ಓದುಗರ ವೇದಿಕೆಯಿಂದ ಆರಂಭವಾಗುವ ಚಟುವಟಿಕೆಗಳು ಸಮಾಜವನ್ನು ತಲುಪಬೇಕು ಇಂದಿನ ಡಿಜಿಟಲ್ ಮತ್ತು ಜಾಗತೀಕರಣ ಯುಗದಲ್ಲಿ ತಂತ್ರಜ್ಞಾನ ಇಡೀ ಜಗತ್ತನ್ನೇ ಕ್ಷಣಮಾತ್ರದಲ್ಲಿ ಒಂದುಗೂಡಿಸಬಲ್ಲುದು. ರೀಡರ್ಸ್ ಕ್ಲಬ್ ಮೂಲಕ ಗ್ಲೋಬಲ್ ಕ್ಲಬ್ ಸಾಧಿಸುವಂತಾಗಬೇಕು ಎನ್ನುವುದರ ಜೊತೆಗೆ ಎನ್-ಲಿಸ್ಟ್, ಮೂಲಕ ವಿವಿಧ ವಿಷಯಗಳಿಗೆ ಸಂಬಂಧಿಸಿದ ಸಂಶೋಧನ ಲೇಖನ ಮತ್ತು ಇ-ಬುಕ್ ಬಳಕೆಯ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ. ಪ್ರಸಾದ್ ರಾವ್ ಎಂ. ಪುಸ್ತಕ ಪ್ರೀತಿ ನಮ್ಮಲ್ಲಿ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಸಹಕಾರಿ ಎಂದರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಐತಿಹಾಸಿಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದಾಗ ಪ್ರಿಂಟಿಂಗ್ ತಂತ್ರಜ್ಞಾನದ ಅನ್ವೇಷಣೆ ಇಂದಿನ ಡಿಜಿಟಲ್ ಯುಗದ ಬೆಳವಣಿಗೆಗೆ ಕಾರಣಗಳಲ್ಲೊಂದು ಎನ್ನುವುದರ ಜೊತೆಗೆ ಕಾರ್ಯಗಾರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ವಿದ್ಯಾರ್ಥಿಗೆ ಸಲಹೆಯಿತ್ತರು. ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮತ್ತು ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ರಾಘವ ನಾಯ್ಕ, ಎಂ.ಕಾಂ. ವಿಭಾಗ ಮುಖ್ಯಸ್ಥ ತಿಮ್ಮಣ್ಣ ಜಿ. ಭಟ್, ಕನ್ನಡ ಎಂ.ಎ. ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿ ಹೆಚ್., ಕಾರ್ಯಾಗಾರ ಸಂಯೋಜಕ ಹಾಗೂ ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ಗ್ರಂಥಾಲಯ ಸಹಾಯಕಿಯಾರಾದ ಪ್ರಮೀಳಾ ಹಾಗೂ ಸುನೀತಾ ಕಾಲೇಜಿನ ಬೋಧಕ-ಬೋಧಕೇತರ ವೃಂದದವರು ಹಾಗೂ ಕಾಲೇಜಿನ ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗಿಯಾದರು. ರಾಜಕೀಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ ನೀಲಾವರ ಕಾರ್ಯಕ್ರಮ ನಿರೂಪಿಸಿದರು.