ಉಡುಪಿ, ನ.10: ಉತ್ತಮ ಆರೋಗ್ಯಕ್ಕಾಗಿ ಹಾಗೂ ರೋಗಗಳ ವಿರುದ್ಧ ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಚಿಕಿತ್ಸೆಗಳು ಹಾಗೂ ಔಷಧಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು. ಅವರು ಶುಕ್ರವಾರ ನಗರದ ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಉಡುಪಿ ಇವರ ಸಹಯೋಗದಲ್ಲಿ ಧನ್ವಂತರಿ ಜಯಂತಿಯ ಅಂಗವಾಗಿ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆಯುರ್ವೇದವು ಆಧುನಿಕ ಕಾಲದಲ್ಲಿ ಪ್ರಸ್ತುತವಾಗಿರುವ ಔಷಧ. ಇದು ಅತ್ಯಂತ ಪುರಾತನ ಆರೋಗ್ಯ ವ್ಯವಸ್ಥೆಯಾಗಿದ್ದು, ರೋಗಗಳ ತಡೆಗಟ್ಟುವಿಕೆ ಹಾಗೂ ಆರೋಗ್ಯ ವೃದ್ಧಿ ಆಯುರ್ವೇದದ ಮುಖ್ಯ ಗುರಿಯಾಗಿದೆ ಎಂದರು. ಧನ್ವಂತರಿಯು ದೈವಿಕ ವೈದ್ಯರು. ರೋಗ ರುಜಿನಗಳಿಂದ ಮುಕ್ತಿ ಹೊಂದಲು ಆಯುರ್ವೇದ ಜ್ಞಾನದ ಅತ್ಯಂತ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯನ್ನು ಮನುಕುಲಕ್ಕೆ ನೀಡಿದ್ದಾರೆ ಎಂದರು. ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು 2016 ರಿಂದ ಆಯುಷ್ ಇಲಾಖೆ ಆಚರಿಸುತ್ತಾ ಬಂದಿದೆ. ಆಯುರ್ವೇದವು ಆಹಾರ, ಯೋಗ, ಗಿಡಮೂಲಿಕೆ ಚಿಕಿತ್ಸೆ ಇತ್ಯಾದಿಯನ್ನು ಒಳಗೊಂಡಂತೆ ಸಂಪ್ರದಾಯಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುತ್ತದೆ. ಸರಕಾರ ಆಯುರ್ವೇದಿಕ ಆಸ್ಪತ್ರೆಗಳ ಮೂಲಕ ಆರೋಗ್ಯ ಸೇವೆಗಳನ್ನು ಒದಗಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಉತ್ತಮ ಚಿಕಿತ್ಸೆ ನೀಡಲು ಆಯುಷ್ ವೈದ್ಯಾಧಿಕಾರಿಗಳು ಮುಂದಾಗಬೇಕು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ದೇವರಾದ ಧನ್ವಂತರಿ ಜಯಂತಿಯನ್ನು ಅಶ್ವಿನಿ ಅಥವಾ ಅಶ್ವಯುಜ ಮಾಸದ ಅಮಾವಾಸ್ಯೆಯ ಹಿಂದಿನ ದಿನದಂದು ಆಚರಿಸಲಾಗುತ್ತಿದೆ. ಈ ಬಾರಿ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ‘ಪ್ರತಿದಿನ ಪ್ರತಿಯೊಬ್ಬರಿಗೂ ಸಮಗ್ರ ಆರೋಗ್ಯಕ್ಕಾಗಿ ಆಯುರ್ವೇದ’ ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ ಎಂದರು. ಆಯುರ್ವೇದದಿಂದ ಪ್ರತಿಯೊಬ್ಬರೂ ಪಡೆದುಕೊಳ್ಳಬಹುದಾದ ಆರೋಗ್ಯ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಲು ಜಯಂತಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಮಟ್ಟದಲ್ಲೂ ಆಚರಿಸಲಾಗುತ್ತಿದೆ ಎಂದರು. ತಜ್ಞ ವೈದ್ಯರಾದ ಡಾ. ಶ್ರೀಧರ್ ಬಾಯರಿ ರವರು ‘ಆಯುರ್ವೇದ ಚಿಕಿತ್ಸೆ’ ಯ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಆಯುಷ್ ಫೆಡರೇಷನ್‌ನ ಜಿಲ್ಲಾ ಅಧ್ಯಕ್ಷ ಡಾ.ನಾರಾಯಣ್ ಅಂಚನ್, ಆಯುಷ್ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉತ್ತಮವಾಗಿ ಧನ್ವಂತರಿ ಆರೋಗ್ಯ ವನಗಳನ್ನು ನಿರ್ಮಿಸಿದ ವಿವಿಧ ಶಾಲೆಗಳ ಶಿಕ್ಷಕರುಗಳಿಗೆ ಸನ್ಮಾನಿಸಲಾಯಿತು. ಡಾ. ವೀಣಾ ಕಾರಂತ ನಿರೂಪಿಸಿ, ಶ್ಯಾಮರಾವ್ ವಂದಿಸಿದರು.