ನಾಡಿನೆಲ್ಲೆಡೆ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರೂ ಈ ಹಬ್ಬದಲ್ಲಿ ಬೆಳಕು ಪ್ರಮುಖ ಪಾತ್ರವಹಿಸುತ್ತದೆ. ಈ ಹಬ್ಬವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದಲ್ಲಿ ಭಿನ್ನತೆ ಮತ್ತು ವಿಶಿಷ್ಟತೆಯಿಂದ ಕೂಡಿರುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಕರ್ನಾಟಕದ ಕರಾವಳಿ ಪ್ರದೇಶಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿನ ತುಳುವರು ದೀಪಾವಳಿ ಹಬ್ಬವನ್ನು ತುಡರ್ ಪರ್ಬ (ಬೆಳಕಿನ ಹಬ್ಬ) ಎಂಬ ಹೆಸರಿನಿಂದ ಬಹಳ ವಿಶೇಷವಾಗಿ ಆಚರಿಸುತ್ತಾರೆ. ಧನ ತ್ರಯೋದಶಿಯ ಐದು ದಿನಗಳ ಕಾಲ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ತುಳುವರು ಮಾತ್ರ ಈ ಹಬ್ಬವನ್ನು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತಾರೆ.
ನರಕ ಚತುರ್ದಶಿ: ಶ್ರೀ ಕೃಷ್ಣನು ನರಕಾಸುರನನ್ನು ಸಂಹಾರ ಮಾಡಿದ ದಿನವನ್ನು ನರಕ ಚತುರ್ದಶಿ ಎಂದು ದೀಪಾವಳಿಯ ಮೊದಲ ದಿನವಾಗಿ ಆಚರಿಸಲಾಗುತ್ತಿದೆ. ಈ ದಿನದಂದು ಬೆಳಿಗ್ಗೆ ಬೇಗನೆ ಎದ್ದು ತಲೆ – ಮೈಗೆಲ್ಲ ಎಣ್ಣೆ ಹಚ್ಚಿ ಸ್ನಾನ ಮಾಡುವ ಕ್ರಮವಿದ್ದು ಇದನ್ನು ತುಳುವಿನಲ್ಲಿ ಮೀಪಿನ ಪರ್ಬ ಎಂದು ಕರೆಯುತ್ತಾರೆ. ದುಷ್ಟ ಸಂಹಾರದ ಸಂಕೇತವಾಗಿ ವಿಜಯೋತ್ಸವ ಸಂಭ್ರಮಿಸಲು ಸುಡುಮದ್ದುಗಳನ್ನು ಈ ದಿನ ಸಿಡಿಸುತ್ತಾರೆ.
ಲಕ್ಷ್ಮೀ ಪೂಜೆ: ದೀಪಾವಳಿಯ ಎರಡನೇ ದಿನ ಅಮವಾಸ್ಯೆಯಾಗಿದ್ದು, ಈ ದಿನದಂದು ಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಹಿಂದಿನ ಕಾಲದಲ್ಲಿ ಹಾಗೂ ಪ್ರಸ್ತುತದಲ್ಲೂ ರೈತರು ಫಸಲನ್ನು ಲಕ್ಷ್ಮೀಗೆ ಅರ್ಪಿಸುವುದರ ಮೂಲಕ ದೇವಿಯು ಸಮೃದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆ ಎನ್ನುವ ನಂಬಿಕೆಯಿದೆ.
ಬಲಿಪಾಡ್ಯಮಿ: ದೀಪಾವಳಿಯ ಮೂರನೇ ದಿನ ಬಲೀಂದ್ರ ಪೂಜೆ ಮಾಡಲಾಗುತ್ತದೆ. ಬಲೀಂದ್ರ ಪೂಜೆಗಾಗಿ ಕೃಷಿ ಕುಟುಂಬಗಳು ತುಳಸಿ ಗಿಡದ ಪಕ್ಕ ವಿಶೇಷವಾಗಿ ಎರಡು ಕಂಬಗಳನ್ನು (ಸೊನೆ ಇರುವ ಮರದ) ನೆಟ್ಟು ಅದರ ಮೇಲೆ ಹಣತೆ ಬೆಳಗುತ್ತಾರೆ. ಜೊತೆಗೆ ಆ ಕಂಬವನ್ನು ಬಾಳೆಗಿಡದ ದಂಡಿನಿಂದ, ಹೂವುಗಳಿಂದ ಅಲಂಕರಿಸಿ ಬಲೀಂದ್ರನ ರೂಪ ಕೊಟ್ಟಿರುತ್ತಾರೆ. ಇದರ ಮುಂದೆ ನಿಂತು ಒಂದು ಮನೆಯಿಂದ ದೂರದ ಇನ್ನೊಂದು ಮನೆಗೆ ಕೇಳುವಂತೆ ಕೂ………ಬಲ ಬಲೀಂದ್ರ ಕರೆಯುತ್ತಾರೆ. ಈ ರೀತಿಯಾಗಿ ಕರೆಯುವುದನ್ನು ಬಲೀಂದ್ರ ಲೆಪ್ಪುನು ಎನ್ನುತ್ತಾರೆ. ಮೊದಲೆಲ್ಲ ಬಲೀಂದ್ರನನ್ನು ಕರೆಯುವುದಕ್ಕೆ ಪಾಡ್ದನ, ಕಥೆಗಳನ್ನು ತುಳುವರು ಹಾಡುತ್ತಿದ್ದು, ಆದರೆ ಈಗ ಇದು ಅಪರೂಪವಾಗಿದೆ.
ಬಲೀಂದ್ರ ಲೆಪ್ಪೋಲೆ: ಕರ್ಗಲ್‌ಲ್ ಕಾಯ್ಪೋನಗ ಬೊಲ್‌ಕಲ್‌ಲ್ ಪೂ ಪೋನಗ, ಉಪ್ಪು ಕರ್ಪೂರ ಆನಗ, ಜಾಲ್ ಪಾದೆ ಆನಗ, ಉರ್ದು ಮದ್ದೋಲಿ ಆನಗ, ಗೊಡ್ಡೆರ್ಮೆ ಗೋಣೆ ಆನಗ, ಎರು ದಡ್ಡೆ ಆನಗ, ನೆಕ್ಕಿದಡಿಟ್ ಆಟ ಆನಗ, ತುಂಬೆದಡಿಟ್ ಕೂಟ ಆನಗ, ದೆಂಬೆಲ್‌ಗ್ ಪಾಂಪು ಪಾಡ್‌ನಗ, ಅಲೆಟ್ಟ್ ಬೊಲ್ನೆಯಿ ಮುರ್ಕುನಗ, ದಂಟೆದಜ್ಜಿ ಮದ್ಮಲಾನಗ, ಗುರ್ಗುಂಜಿದ ಕಲೆ ಮಾಜಿನಗ ಒರಬತ್ತ್ ಪೋ ಬಲಿಯೇಂದ್ರ… ಕೂ… ಕೂ… ಕೂ…
ಇದೇ ದಿನದಂದು ಹಟ್ಟಿಯಲ್ಲಿರುವ ದನ-ಕರುಗಳಿಗೆ ಸ್ನಾನ ಮಾಡಿಸಿ ಅವುಗಳ ಕೊರಳಿಗೆ ಹೂವಿನ ಹಾರ ಹಾಕಿ, ತಿನಿಸು ನೀಡಿ, ಆರತಿ ಬೆಳಗಿಸಿ ಗೋಪೂಜೆಯನ್ನು ಮಾಡಲಾಗುತ್ತದೆ. ತುಳುನಾಡಿನಲ್ಲಿ ದೀಪಾವಳಿಯ ಪ್ರಸ್ತುತ ಆಚರಣೆಗೂ ಪ್ರಾಚೀನ ಆಚರಣೆಗೂ ಅಜಗಜಾಂತರ ವ್ಯತ್ಯಾಸವಿದ್ದರೂ ಸಹ ಹಬ್ಬವನ್ನು ವೈವಿಧ್ಯಮಯ ಮತ್ತು ವಿಜೃಂಭಣೆಯಿಂದ ಆಚರಿಸುವುದನ್ನು ಕಾಣಬಹುದು.
-ವಿಜಿತ ಅಮೀನ್, ಬಂಟ್ವಾಳ