ಕುಂದಾಪುರ, ನ.10: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ಎನ್.ಸಿ.ಸಿ. ಘಟಕದ ಜಂಟಿ ಆಶ್ರಯದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಮೆಟ್ಟಿಲನ್ನೇ ಹತ್ತದ ಹಾಜಬ್ಬರು ತನ್ನೂರಿನಲ್ಲಿ ಶಾಲೆ ತೆರೆಯುವ ಮೂಲಕ ನಮಗೆಲ್ಲ ಮಾದರಿಯಾದರು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡವರು. ಸಾಧನೆಗೆ ಶ್ರೀಮಂತಿಕೆ, ಜಾತಿ, ಧರ್ಮ ಹಾಗೂ ಭಾಷೆಯ ಅಗತ್ಯವಿಲ್ಲ. ಛಲ ಹಾಗೂ ಸಾಧಿಸುವ ಮನಸ್ಸು ಜತೆಗೆ ದೇಶಪ್ರೇಮ ಇದ್ದರೆ ಹರೇಕಳ ಹಾಜಬ್ಬರಂತೆ ಅಕ್ಷರ ಕ್ರಾಂತಿ ಮಾಡಲು ಸಾಧ್ಯ ಎಂದರು.
ಜೆಸಿ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಅತಿಥಿ ನೆಲೆಯ ಮಾತುಗಳನ್ನಾಡಿದರು. ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಚೇತನ್ ಶೆಟ್ಟಿ ಕೋವಾಡಿ ಅತಿಥಿಗಳನ್ನು ಪರಿಚಯಿಸಿದರು. ಎನ್.ಸಿ.ಸಿ. ಅಧಿಕಾರಿಗಳಾದ ಶರತ್ ಕುಮಾರ್ ಸ್ವಾಗತಿಸಿ, ಹರೀಶ್ ಬಿ. ವಂದಿಸಿದರು. ಎನ್.ಎಸ್.ಎಸ್. ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿ ಶ್ರೇಯಾ ಖಾರ್ವಿ ಪ್ರಾರ್ಥಿಸಿದರು.