ಮಲ್ಪೆ, ನ.10: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಅಧ್ಯಾಪಕರು 2023-24ನೇ ಸಾಲಿನ ಸಂಶೋಧನಾತ್ಮಕ ಲೇಖನಗಳ ಗ್ರಂಥವನ್ನು ರೆಡ್‌ಕ್ರಾಸ್ ಘಟಕ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಬಿಡುಗಡೆಗೊಳಿಸಿದರು. ಸ್ನಾತಕೋತ್ತರ ಅಧ್ಯಯನದಲ್ಲಿ ಸಂಶೋಧನೆಯ ಮಹತ್ವವನ್ನು ಮನಗಾಣಿಸಲು ಈ ಗ್ರಂಥ ಉಪಯುಕ್ತವೆಂದು ಅಭಿಪ್ರಾಯಪಟ್ಟರು. ಡಾ. ದುಗ್ಗಪ್ಪ ಕಜೆಕಾರ್ ಅವರು ಈ ಸಾಲಿನ ಗ್ರಂಥಕ್ಕೆ ಪ್ರೋಬ್ಸ್ ಎಂದು ಹೆಸರು ನೀಡಿದ್ದು ಪ್ರತಿ ವರ್ಷದಂತೆ ಕಾಲೇಜಿನ ಅಧ್ಯಾಪಕರುಗಳು ಪಾಠ ಪ್ರವಚನದೊಂದಿಗೆ ಸಂಶೋಧನೆಯಲ್ಲೂ ತೊಡಗಿಕೊಂಡಿರುವುದನ್ನು ವಿವರಿಸಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಡಾ. ಜಗದೀಶ ಶೆಟ್ಟಿ ಶುಭ ಹಾರೈಸಿದರು. ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ರತ್ನಮಾಲಾ ಕಾರ್ಯಕ್ರಮ ನಿರೂಪಿಸಿದರು.