ಉಡುಪಿ, ನ.6: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ (ಡೇ-ನಲ್ಮ್) ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ಸಾಲ ಸೌಲಭ್ಯ ಪಡೆಯಲು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ/ವ್ಯಾಪಾರ (ವೈಯಕ್ತಿಕ ಹಾಗೂ ಗುಂಪು ಚಟುವಟಿಕೆ) ಕೈಗೊಳ್ಳಲು ಬಡ್ಡಿ ಸಹಾಯಧನ ಯೋಜನೆ; ಈಗಾಗಲೇ ರಚಿಸಲಾಗಿರುವ – ಕಾರ್ಯ ನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳಿಗೆ ಸುತ್ತುನಿಧಿ, ಬ್ಯಾಂಕ್ ಸಾಲ (ಕ್ರೆಡಿಟ್ ಲಿಂಕೇಜ್) ಮತ್ತು ಹೊಸದಾಗಿ ಸ್ವ-ಸಹಾಯ ಗುಂಪುಗಳ ರಚನೆಗೆ ಈ ಅಭಿಯಾನದಡಿ ಅವಕಾಶ ಇದ್ದು, ಇದರ ಪ್ರಯೋಜನ ಪಡೆಯಲು ನವೆಂಬರ್ 15 ರ ಒಳಗಾಗಿ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಧಾನ ಮಂತ್ರಿ ಆತ್ಮ ನಿರ್ಭರ್ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ತಮ್ಮ ವ್ಯಾಪಾರ/ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿ ಹಾಗೂ ಪುನರ್ ಸ್ಥಾಪನೆಗಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಹಂತದಲ್ಲಿ ತಲಾ 10,000 ರೂ., 20,000 ರೂ. ಮತ್ತು 50,000 ರೂ. ಸಾಲ ಸೌಲಭ್ಯವನ್ನು ಈಗಾಗಲೇ ನೀಡಲಾಗುತ್ತಿದ್ದು, ಮನೆ ಮನೆಗೆ ದಿನಪತ್ರಿಕೆ, ಹಾಲು ವಿತರಣೆ ವೃತ್ತಿಯಲ್ಲಿ ತೊಡಗಿಸಿ ಕೊಂಡವರಿಗೂ ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ ನಗರಸಭೆ, ಕಾರ್ಕಳ, ಕುಂದಾಪುರ ಹಾಗೂ ಕಾಪು ಪುರಸಭೆ, ಸಾಲಿಗ್ರಾಮ ಹಾಗೂ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯಸ್ಥರು ಅಥವಾ ಸಮುದಾಯ ಸಂಘಟನಾಧಿಕಾರಿಯವರನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.