ಪೆರಂಪಳ್ಳಿ, ನ.6: ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಮಣಿಪಾಲ, ಕೆಥೊಲಿಕ್ ಸಭಾ ಪೆರಂಪಳ್ಳಿ ಘಟಕ, ಸಮುದಾಯ ವೈದ್ಯಕೀಯ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ ಇವರ ಸಹಯೋಗದೊಂದಿಗೆ ಪೆರಂಪಳ್ಳಿ ಫಾತಿಮಾ ಸಭಾಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಚಿಕಿತ್ಸಾ ಶಿಬಿರವು ನಡೆಯಿತು.
ಶಿಬಿರವನ್ನು ಧರ್ಮಗುರುಗಳಾದ ಅನಿಲ್ ಡಿಸೋಜಾ ಉದ್ಘಾಟಿಸಿದರು. ಕೆಥೊಲಿಕ್ ಸಭಾದ ಅಧ್ಯಕ್ಷರಾದ ಫೆಲಿಕ್ಸ್ ಡಿಸೋಜ, ನಿಕಟಪೂರ್ವ ಅಧ್ಯಕ್ಷರಾದ ಒಲಿವೇರಾ ಡಿಸೋಜ, ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಾಮಿನಿ ಕುಮಾರ್, ಸಮುದಾಯ ವೈದ್ಯಕೀಯ ವಿಭಾಗದ ಡಾ. ಜೆನ್ನಿಫರ್ ಹಾಗೂ ಮಣಿಪಾಲ ದಂತ ವಿಶ್ವವಿದ್ಯಾಲಯದ ಡಾ. ನಿಶು ಅವರು ಉಪಸ್ಥಿತರಿದ್ದರು.
ಕಸ್ತೂರ್ಬಾ ಆಸ್ಪತ್ರೆಯ ವಿವಿಧ ವಿಭಾಗದ 10 ವೈದ್ಯರು ಮಧುಮೇಹ ತಪಾಸಣೆ, ಚರ್ಮರೋಗ ತಪಾಸಣೆ, ಕಣ್ಣಿನ ತಪಾಸಣೆ, ಸ್ತ್ರೀರೋಗ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ ಹಾಗೂ ರಕ್ತ ಪರೀಕ್ಷೆಯನ್ನು ನಡೆಸಿದರು. 136 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಕೆಥೋಲಿಕ್ ಸಭಾದ ಕಾರ್ಯದರ್ಶಿ ಅನಿತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.