ಮಲ್ಪೆ, ಅ.28: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಯೂತ್ ರೆಡ್ ಕ್ರಾಸ್ ವಿದ್ಯಾರ್ಥಿ ಸ್ವಯಂ ಸೇವಕರಿಗಾಗಿ ಆರೋಗ್ಯಪೂರ್ಣ ಜೀವನಶೈಲಿಯ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅಮೆರಿಕಾದ ಮಿಸ್ಟೋರಿ ವಿಶ್ವವಿದ್ಯಾಲಯದ ಮೆಡಿಸಿನ್ ವಿಭಾಗದ ಡಯಾಬಿಟಿಸ್ ಸಂಶೋಧನಾ ಪ್ರೊಫೆಸರ್ ಹಾಗೂ ಮಣಿಪಾಲ್ ಕೆಎಂಸಿ ಸಂಶೋಧನಾ ಅತಿಥಿ ಅಧ್ಯಾಪಕರಾದ ಡಾ. ಅಣ್ಣಯ್ಯ ರಾವ್ ಅರೂರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಮಧ್ಯವಯಸ್ಕರು ಆಧುನಿಕ ಜೀವನಶೈಲಿಯ ಅನಿವಾರ್ಯತೆಯಲ್ಲಿ ಹಾಗೂ ಯುವಜನತೆ ಶೋಕಿ ಜೀವನಶೈಲಿಗೆ ಮಾರುಹೋಗಿ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆ.
ನಮ್ಮ ಹಿರಿಯರು ಸಮಯಕ್ಕೆ ಸರಿಯಾಗಿ ಹಿತಮಿತ ಆಹಾರ, ನಿದ್ರೆ, ಶ್ರಮ ಜೀವನದ ಮೂಲಕ ದೀರ್ಘಾಯುಷ್ಯದ ಅರ್ಥಪೂರ್ಣ ಆರೋಗ್ಯಪೂರ್ಣ ಬದುಕು ಕಟ್ಟಿಕೊಂಡಿದ್ದರು. ಅವರ ಬದುಕು ಪ್ರಕೃತಿ ನಿಯಮಕ್ಕೆ ಪೂರಕವಾಗಿತ್ತು ಆದರೆ ಇಂದು ನಾವು ನೈತಿಕತೆ ಮತ್ತು ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಸ್ವಾರ್ಥ, ದ್ವೇಷ, ಅಸೂಯೆ, ಅಹಂಕಾರ, ಯಾಂತ್ರಿಕತೆ ಮೈಗೂಡಿಸಿಕೊಂಡು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೇವೆ. ನಮ್ಮ ಇಂದಿನ ಬದುಕಿನ ಶೈಲಿ ಬದಲಾಯಿಸಿಕೊಳ್ಳಬೇಕಾದ ತಮ್ಮ ನಡವಳಿಕೆ,ಆರೋಗ್ಯ ವೃದ್ಧಿಸುವ ಆಹಾರ,ಒತ್ತಡ ರಹಿತ ದಿನಚರಿ, ಯೋಗ ಧ್ಯಾನ, ಸಂಗೀತ, ಸಾಹಿತ್ಯ, ಪ್ರೀತಿಯಿಂದ ವೃತ್ತಿ ಧರ್ಮ ಪಾಲನೆ ಸಾಮಾಜಿಕ ಸೌಹಾರ್ದತೆ ಮುಂತಾದ ರೋಗ ನಿರೋಧಕ ಸದಾಚಾರಗಳ ಜೊತೆಗೆ ನಾನು ಎನ್ನುವ ಅಹಂಕಾರ ತೊರೆದು ನನಗಿಂತಲೂ ಶ್ರೇಷ್ಠ ಸೃಷ್ಟಿಕರ್ತನಲ್ಲಿ ಶ್ರದ್ಧಾಭಾವನೆಯಲ್ಲಿ ಅಧೀನವಾಗಿ ತನ್ನನ್ನು ತಾನು ನಿಯಂತ್ರಿಸಿಕೊಂಡಲ್ಲಿ ತಾನು ಬಾಳಿ ಬೆಳಗುವುದರ ಜೊತೆಗೆ ಇಡೀ ಸಮಾಜದ ಉನ್ನತಿ ಸಾಧಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಸುರೇಶ್ ರೈ ಕೆ ಮಾತನಾಡಿ, ವಿದ್ಯಾರ್ಥಿಗಳು ಎಳೆ ವಯಸ್ಸಿನಿಂದಲೇ ಆರೋಗ್ಯವಂತ ಜೀವನಶೈಲಿ ಮೈಗೂಡಿಸಿಕೊಂಡು ಸಮಾಜದ ಸ್ವಾಸ್ಥ್ಯ ಕಾಪಾಡಲು ಸೇವಾ ಮನೋಭಾವನೆಯನ್ನು ಹೊಂದಬೇಕೆಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಧಾಕೃಷ್ಣ, ಶೈಕ್ಷಣಿಕ ಸಲಹೆಗಾರರಾದ ಡಾ. ಪ್ರಸಾದ್ ರಾವ್, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ಬೋಧಕ ಬೋಧಕೇತರ ವೃಂದದವರು, ರೆಡ್ ಕ್ರಾಸ್ ವಿದ್ಯಾರ್ಥಿ ನಾಯಕರದ ವಿನಿಷ, ವೃಂದ ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೋಜಿಸಿದ್ದ ಯೂತ್ ರೆಡ್ ಕ್ರಾಸ್ ಸಂಚಾಲಕ ಪ್ರಶಾಂತ್ ನೀಲಾವರ ಅವರು ಡಾ. ಎ.ಆರ್ ಆರೋರು ಅವರನ್ನು ಪರಿಚಯಿಸಿ ಸ್ವಾಗತಿಸಿದರು. ರೆಡ್ ಕ್ರಾಸ್ ವಿದ್ಯಾರ್ಥಿ ನಾಯಕ ಶ್ರೀರಾಮ್ ವಂದನಾರ್ಪಣೆಗೈದರು. ಸ್ವಯಂಸೇವಕಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.