ಮೈಸೂರು, ಅ.24: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ಐತಿಹಾಸಿಕ ಜಂಬೂಸವಾರಿ ನಡೆಯಿತು. ನಾಡಿನ ಪರಂಪರೆ, ಸಂಸ್ಕೃತಿ ಮೇಳೈಸುವ ಮೆರವಣಿಗೆಯ ವೈಭವವನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡರು. ಅಂಬಾವಿಲಾಸ ಅರಮನೆಯ ಬಲರಾಮದ್ವಾರದ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 1.45ಕ್ಕೆ ನಂದಿಧ್ವಜ ಪೂಜೆ ನೆರವೇರಿಸಿದರು. 108 ನಂದಿಧ್ವಜಗಳ ಕುಣಿತ ನೋಡುಗರ ಗಮನ ಸೆಳೆಯಿತು. ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೊದಲಾದವರೊಂದಿಗೆ ತೆರೆದ ಜೀಪಿನಲ್ಲಿ ಅರಮನೆ ಆವರಣಕ್ಕೆ ಆಗಮಿಸಿದರು.
ಗಜಪಡೆಯ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡಿನ ಶಕ್ತಿದೇವತೆ ಚಾಮುಂಡೇಶ್ವರಿಯನ್ನು ಹೊತ್ತು ವೇದಿಕೆಯ ಮುಂದೆ ಬಂದು ನಿಲ್ಲುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ರಾಜವಂಶಸ್ಥ ಯದುವೀರ್ ಗಣ್ಯರೊಂದಿಗೆ ಪುಷ್ಪಾರ್ಚನೆ ಮಾಡಿದರು. 21 ಬಾರಿ ಕುಶಾಲ ತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಲಾಯಿತು.
ಅಂಬಾರಿ ಆನೆಯು ಪೊಲೀಸ್ ಅಶ್ವದಳದ ಬೆಂಗಾವಲಿನಲ್ಲಿ ಸಾಗಿತು. ಸಿಬ್ಬಂದಿಗಳು ರಾಜಪೋಷಾಕು ಧರಿಸಿ ವಿವಿಧ ಲಾಂಛನಗಳನ್ನು ಹಿಡಿದು ಅಂಬಾರಿಯ ಸುತ್ತ ಮರವಣಿಗೆಯಲ್ಲಿ ಸಾಗಿದರು. ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಹೈವೆ ವೃತ್ತದ ಮೂಲಕ ಬನ್ನಿಮಂಟಪವನ್ನು ತಲುಪಿತು.