ವಿದ್ಯಾಗಿರಿ, ಅ. 22: ತುಳುನಾಡು ಮಾತೃ ಪ್ರಧಾನವಾಗಿದ್ದು, ಇಲ್ಲಿ ಹೆಣ್ಣು ಮತ್ತು ಮಣ್ಣಿಗೆ ಹೆಚ್ಚಿನ ಗೌರವ ಇದೆ ಎಂದು ಸಾಹಿತಿ ಹಾಗೂ ಸಂಶೋಧಕರಾದ ಡಾ. ಇಂದಿರಾ ಹೆಗ್ಗಡೆ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಹಮ್ಮಿಕೊಂಡ ಸಂಸ್ಕೃತಿ ಚಿಂತನ ಕಾರ್ಯಕ್ರಮದಲ್ಲಿ ಅವರು ಆದಿ ಆಲಡೆಗಳು ಕುರಿತು ಮಾತನಾಡಿದರು.
ತುಳುನಾಡು ಹೊರತುಪಡಿಸಿದರೆ, ಅಸ್ಸಾಂ ಹಾಗೂ ಕೇರಳ ರಾಜ್ಯದಲ್ಲಿ ನಾವು ಮಾತೃಪ್ರಧಾನ ಸಂಸ್ಕೃತಿಯನ್ನು ಕಾಣಬಹುದಾಗಿದೆ. ಯಾವುದೇ ಆಚರಣೆ ಮಾಡುವ ಮೊದಲು, ಅದರ ಆಶಯ ಹಾಗೂ ಅಂತಸತ್ವ ಅರಿತುಕೊಳ್ಳಬೇಕು. ಕುರುಡಾಗಿ ಪಾಲಿಸಬಾರದು ಎಂದರು. ತುಳುನಾಡಿನ ಸಂಸ್ಕೃತಿಯಲ್ಲಿ ಪುನರ್ಜನ್ಮದ ಪರಿಕಲ್ಪನೆ ಇಲ್ಲ. ನಮ್ಮ ಕೆಲಸವನ್ನು ಪರಿಪೂರ್ಣವಾಗಿ ಮಾಡಿದಾಗ ಸಂತೃಪ್ತಿ ಸಿಗುತ್ತದೆ. ಆಗ ಅತೃಪ್ತಿಗೆ ಅವಕಾಶವೇ ಇಲ್ಲ ಎಂದರು. ನಿಮ್ಮ ಸುತ್ತಲೂ ಸೃಷ್ಟಿಯಾಗುವ ಭ್ರಮಾ ಲೋಕದಿಂದ ಹೊರಬನ್ನಿ. ಮಾತು, ಬರಹಕ್ಕಿಂತ ಹೆಚ್ಚಾಗಿ ಓದಿನ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು. ಯಾವುದೇ ಹೇರಿಕೆಯ ಬದಲು ನಾವು ನಮ್ಮ ಸಂಸ್ಕೃತಿಯನ್ನು ಪ್ರೀತಿಸಬೇಕು ಹಾಗೂ ಪಾಲಿಸಬೇಕು ಎಂದು ವಿವರಿಸಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಧರ್ಮಗಳ ಕನ್ನಡಕ ಧರಿಸಿಕೊಂಡು ಪ್ರಪಂಚವನ್ನು ನೋಡುವ ಬದಲು ಬರಿಗಣ್ಣಿನಿಂದ ನೋಡಬೇಕು. ಸಮಾಜ ಉತ್ತಮವಾಗಿ ಕಾಣುತ್ತದೆ. ಬದುಕು ಉನ್ನತಿ ಸಾಧಿಸುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕಿ ಡಾ. ಸುಧಾರಾಣಿ ಸಂವಾದ ನಡೆಸಿಕೊಟ್ಟರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಇದ್ದರು. ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಯೋಗೀಶ್ ಕೈರೋಡಿ ಸ್ವಾಗತಿಸಿ, ಸ್ಪರ್ಶಾ ಪಂಜಿಕಲ್ಲು ಕಾರ್ಯಕ್ರಮ ನಿರೂಪಿಸಿದರು. ಋತಿಕ್ ಜೆ. ಕುಂದರ್ ವಂದಿಸಿದರು.