ಬ್ರಹ್ಮಾವರ, ಅ.21: ಜಿಲ್ಲಾ ಪಂಚಾಯತ್ ಉಡುಪಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೃಷಿ ವಿಜ್ಜಾನ ಕೇಂದ್ರ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕೃಷಿ ಸಖಿಯರಿಗೆ ಪರಿಸರ ಕೃಷಿ ವಿಧಾನಗಳ ಕುರಿತು 6 ದಿನದ ತರಬೇತಿಯ ಸಮಾರೋಪ ಸಮಾರಂಭ ಬ್ರಹ್ಮಾವರದ ಕೃಷಿ ವಿಜ್ಜಾನ ಕೇಂದ್ರದಲ್ಲಿ ನೆಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕರಾದ ಪ್ರಶಾಂತ್ ವಿ ರಾವ್ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ, ಇಂದು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯನ್ನು ಅಭಿವೃದ್ಧಿಪಡಿಸಲು ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸೇವೆಗಳನ್ನು ನೀಡಲು ಕೃಷಿ ಸಖಿಯರನ್ನು ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಆಯ್ಕೆ ಮಾಡಲಾಗಿದೆ. ಇಂದು ಸರಕಾರ ರೈತರ ಸಬಲೀಕರಣಕ್ಕೆ ಅನೇಕ ಯೋಜನೆಗಳನ್ನು ರೂಪಿಸುತಿದ್ದು, ಈ ಯೋಜನೆಗಳನ್ನು ಅರ್ಹ ರೈತರಿಗೆ ತಲುಪಿಸಲು ಕೃಷಿ ಸಖಿಯರು ಸೇತುವೆಯಾಗಿ ಕರ್ತವ್ಯ ನಿರ್ವಹಿಸಬೇಕು.
ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಹಳ್ಳಿಗಳಲ್ಲಿ ಹೆಚ್ಚಿನ ಮಹಿಳೆಯರು ಜೀವನ ನಿರ್ವಹಣೆಗೆ ಕೃಷಿ ಅವಲಂಬಿಸಿದ್ದಾರೆ. ಇಂದು ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಕೃಷಿ ಸಖಿಯರು ಸಂಬಂಧಪಟ್ಟ ಇಲಾಖೆಯ ಜೊತೆ ಕೈ ಜೋಡಿಸಬೇಕೆಂದು ತಿಳಿಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳಾ ರೈತ ಉತ್ಪಾದಕ ಗುಂಪುಗಳನ್ನು ರಚಿಸುವುದರ ಮೂಲಕ ಮೌಲ್ಯವರ್ಧನೆಗೆ ಹೆಚ್ಚಿನ ಗಮನಹರಿಸಬೇಕು, ಆ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೃಷಿ ಸಖಿಯರು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ತರಬೇತಿ ಪಡೆದ ಎಲ್ಲಾ ಕೃಷಿ ಸಖಿಯರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವುದರ ಮೂಲಕ ಗ್ರಾಮದ ರೈತರ ಸಬಲೀಕರಣಕ್ಕೆ ಶ್ರಮಿಸಬೇಕೆಂದು ತಿಳಿಸಿ ತರಬೇತಿ ಪಡೆದ ಎಲ್ಲಾ ಕೃಷಿ ಸಖಿಯರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಹ ಸಂಶೋಧನಾ ನಿರ್ದೇಶಕರಾದ ಡಾ. ಲಕ್ಷ್ಮಣ ಮಾತನಾಡಿ, ಇಂದು ಸರಕಾರ ವಿವಿಧ ಚಟುವಟಿಕೆಗಳನ್ನು ಗ್ರಾಮ ಪಂಚಾಯತ್ ನ ಕಟ್ಟ ಕಡೆಯ ಮಹಿಳೆಯರಿಗೆ ತಲುಪಿಸಲು ವಿವಿಧ ಸಖಿಯರನ್ನು ಆಯ್ಕೆ ಮಾಡಿದೆ. ಅದರಲ್ಲಿ ಕೃಷಿ ಕ್ಷೇತ್ರದ ಸೌಲಭ್ಯಗಳನ್ನು ತಲುಪಿಸಲು ಕೃಷಿ ಸಖಿಯರನ್ನು ಆಯ್ಕೆ ಮಾಡಿದೆ. ಜೆಲ್ಲೆಯಲ್ಲಿ ಈಗಾಗಲೇ ಕೃಷಿ ಸಖಿಯರ 5 ತಂಡದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ತರಬೇತಿ ಪಡೆದ ಕೃಷಿ ಸಖಿಯರು ತಮ್ಮ ಗ್ರಾಮ ಪಂಚಾಯತ್ ನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸರಕಾರದ ಕೃಷಿ ಸಂಬಂಧಿಸಿದ ಕಾರ್ಯಕ್ರಮಗಳನ್ನು, ಸೌಲಭ್ಯಗಳನ್ನು, ತರಬೇತಿಗಳನ್ನು ಗ್ರಾಮ ಪಂಚಾಯತ್ ಮಟ್ಟದ ರೈತರಿಗೆ ತಲುಪಿಸುವ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಬಿ ಧನಂಜಯ್, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ ಸುಧೀರ್ ಕಾಮತ್ ಕೆ. ವಿ., ಜಿಲ್ಲಾ ಪಂಚಾಯತ್ ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ವಲಯ ಕೃಷಿ ವ್ಯವಸ್ಥಾಪಕರಾದ ರಂಜಿತಾ, ಅಶ್ವಿನಿ, ಸಂತೃಪ್ತಿ ಉಪಸ್ಥಿತರಿದ್ದರು. ಕೃಷಿ ಸಖಿಯರಾದ ಜ್ಯೋತಿ ಡಿ ಪ್ರಭು, ಲೋಲಕ್ಷಿ, ವಿದ್ಯಾ ತರಬೇತಿ ಅನುಭವ ಹಂಚಿಕೊಂಡರು. ಸಹ ಸಂಶೋಧಕ ಡಾ. ಸಚಿನ್ ಯು ಎಸ್ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನಿ ಡಾ. ಸದಾನಂದ ಆಚಾರ್ಯ ಬಿ ವಂದಿಸಿದರು.