ಮಲ್ಪೆ, ಅ.21: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐಕ್ಯೂಎಸಿ ಮತ್ತು ಯೂತ್ ರೆಡ್‌ಕ್ರಾಸ್ ಆಶ್ರಯದಲ್ಲಿ ಕಾಲೇಜಿನ ರೆಡ್‌ಕ್ರಾಸ್ ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಉಡುಪಿ ವಿಭಾಗದ ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ರೆಡ್‌ಕ್ರಾಸ್‌ನ ಉಗಮ ಬೆಳವಣಿಗೆಯ ವಿವರ ನೀಡುವುದರ ಜೊತೆಗೆ ರೆಡ್‌ಕ್ರಾಸ್‌ನ ಮೂಲ ತತ್ವಗಳಾದ ಮಾನವೀಯತೆ, ನಿಸ್ಪಕ್ಷಪಾತ, ಸ್ವಾತಂತ್ರ್ಯ, ಸ್ವಯಂ ಸೇವೆ, ಐಕ್ಯಮತ್ಯ ಮತ್ತು ವಿಶ್ವವ್ಯಾಪಕತೆಯ ಮಹತ್ವ ವಿವರಿಸಿದರು. ರೆಡ್‌ಕ್ರಾಸ್ ಕೇವಲ ರಕ್ತದಾನ ಮತ್ತು ವಿಪತ್ತು ನಿರ್ವಹಣೆಗಷ್ಟೇ ಸೀಮಿತಗೊಳಿಸದೆ ಮಾನವ ಸಂಕಷ್ಟಗಳಿಗೆ ಸ್ಪಂದಿಸುವ ಸೇವಾ ಭಾವನೆಯನ್ನು ರೂಢಿಸಿಕೊಳ್ಳಬೇಕೆಂದರು.
ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ ಪ್ರತಿಜ್ಞಾವಿಧಿ ಬೋಧಿಸಿ ವಿದ್ಯಾರ್ಥಿ ದಿಸೆಯಿಂದಲೇ ಸಮಾಜಮುಖಿಯಾಗಿ ಬೆಳೆಯಲು ರೆಡ್‌ಕ್ರಾಸ್‌ನಂತಹ ಸಂಸ್ಥೆಗಳು ಸಹಕಾರಿ ಎಂದರು. ಯೂತ್‌ರೆಡ್‌ಕ್ರಾಸ್ ಸಂಚಾಲಕ ಪ್ರಶಾಂತ್ ನೀಲಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ರೆಡ್‌ಕ್ರಾಸ್ ವಿದ್ಯಾರ್ಥಿ ನಾಯಕಿಯರಾದ ವಿನೀಶಾ ಸ್ವಾಗತಿಸಿ, ವೃಂದ ವಂದಿಸಿದರು. ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್‌ನ ಎಲ್ಲಾ ವಿದ್ಯಾರ್ಥಿ ಸ್ವಯಂ ಸೇವಕರ ಜೊತೆ ಬೋಧಕ- ಬೋಧಕೇತರ ವೃಂದದವರು ಭಾಗಿಯಾದರು.