ಉಡುಪಿ, ಅ.20: ಶಿರ್ವ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೊರ್ಕಳಂಗಡಿಯ ಪಾಂಡುರಂಗ ಪ್ರಭು ಅವರ ಜಾಗದಲ್ಲಿ ಎರಡು ಗಡಿಕಲ್ಲುಗಳು ಪತ್ತೆಯಾಗಿದ್ದು, ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ದಿವ್ಯ ಅವರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ. ಪತ್ತೆಯಾದ ಎರಡು ಗಡಿಕಲ್ಲುಗಳನ್ನು ಕಣ (ಗ್ರಾನೈಟ್) ಶಿಲೆಯಲ್ಲಿ ನಿರ್ಮಾಣ ಮಾಡಿದ್ದು, ಶಿವಲಿಂಗ ಮತ್ತು ಮೇಲ್ಭಾಗದ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯನ್ನು ನೋಡಬಹುದು. ಇದೇ ಮಾದರಿಯ ಇನ್ನೂ ಎರಡು ಗಡಿಕಲ್ಲುಗಳು ಈ ಪ್ರದೇಶದಲ್ಲಿವೆ ಎಂದು ಸ್ಥಳೀಯರು ಮಾಹಿತಿಯನ್ನು ನೀಡಿರುತ್ತಾರೆ.
ಇಂತಹ ಕೆತ್ತನೆಯಿರುವ ಗಡಿ ಕಲ್ಲುಗಳನ್ನು ಲಿಂಗಮುದ್ರೆ ಕಲ್ಲು ಎಂದು ಕರೆಯಲಾಗುತ್ತದೆ. ಪ್ರಾಚೀನ ಕಾಲದಲ್ಲಿ ಭೂಮಿಯನ್ನು ದಾನವಾಗಿ ಕೊಟ್ಟಂತಹ ಸಂದರ್ಭದಲ್ಲಿ ದಾನ ಭೂಮಿಯ ಚತುಸ್ಸೀಮೆಯನ್ನು ಗುರುತಿಸಲು ಈ ಲಿಂಗಮುದ್ರೆ ಕಲ್ಲುಗಳನ್ನು ಹಾಕಲಾಗುತ್ತಿತ್ತು. ಕಾಲಮಾನದ ದೃಷ್ಟಿಯಿಂದ ಈ ಲಿಂಗಮುದ್ರೆ ಕಲ್ಲುಗಳು ಸುಮಾರು 15-16ನೇ ಶತಮಾನಕ್ಕೆ ಸೇರುತ್ತದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಸೋಮನಾಥ ಕುತ್ಯಾರು ಸಹಕಾರ ನೀಡಿರುತ್ತಾರೆ.