ತಾಲೂಕು ಕೇಂದ್ರವಾದ ಕಾಪುವಿನಿಂದ ಸುಮಾರು 14 ಕಿ. ಮೀ ದೂರದಲ್ಲಿರುವ ಗ್ರಾಮವೇ ಶಿರ್ವ. ಇಲ್ಲಿ ಶಿರ್ವೊನು ರಾಜ ಮನೆತನ ಆಳ್ವಿಕೆ ಮಾಡಿತ್ತು ಎಂಬ ಐತಿಹ್ಯವಿದೆ.
ಶ್ರೀ ವಿಷ್ಣುಮೂರ್ತಿ ದೇವಾಲಯ: ಪ್ರಕೃತಿ ಮಡಿಲ್ಲಿರುವ ಈ ದೇವಾಲಯಕ್ಕೂ ಪಿಲಾರ್ಕಾನ ಮತ್ತು ಮಾಣಿಬೆಟ್ಟುವಿನ ಮಹಾಲಿಂಗೇಶ್ವರ ದೇವಾಲಯ, ಮುಲ್ಕಾಡಿ ಮತ್ತು ಕುಂಜಾರುಗಿರಿಯ ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ಒಂದಕ್ಕೊಂದು ನಿಕಟಪೂರ್ವ ಸಂಬಂಧವಿದೆ ಎಂದು ಹೇಳಲಾಗುತ್ತದೆ. ದಂತಕಥೆಯ ಪ್ರಕಾರ ಈ ದೇವಾಲಯವನ್ನು ಭಾರ್ಗವ ಮುನಿಗಳು ಪ್ರತಿಷ್ಠಾಪಿಸಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದು, ಪ್ರಸ್ತುತ ಈ ದೇವಾಲಯದ ಆಡಳಿತವನ್ನು ನಡಿಬೆಟ್ಟುವಿನ ಅರಸು ಮನೆತನದವರು ನೋಡಿಕೊಳ್ಳುತ್ತಿದ್ದಾರೆ. ಈ ದೇವಾಲಯದ ಮುಖ್ಯದ್ವಾರದಲ್ಲಿ ವಿಷ್ಣುವಿನ ದಶವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ ಮತ್ತು ಕಲ್ಕಿ ಅವತಾರಗಳಿದ್ದು, ದೇವಸ್ಥಾನದ ಒಳಭಾಗದಲ್ಲಿ ಕಲ್ಲಿನಿಂದ ಮಾಡಲ್ಪಟ್ಟ ಕೆತ್ತನೆಗಳನ್ನು ಕಾಣಬಹುದಾಗಿದೆ.
ದೇವಾಲಯದ ಗರ್ಭಗುಡಿಯಲ್ಲಿ ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟ ಮೂರು ಮುಕ್ಕಾಲು ಅಡಿ ಎತ್ತರದ ವಿಷ್ಣುಮೂರ್ತಿ ದೇವರ ವಿಗ್ರಹವಿದೆ. ಗರ್ಭಗುಡಿಯ ಎಡಬಾಗದಲ್ಲಿ ದುರ್ಗಾಪರಮೇಶ್ವರಿ ದೇವರ ಸಾನಿಧ್ಯವಿದ್ದು, ಅಲ್ಲಿಯೇ ಒಂದು ದೊಡ್ಡದಾದ ಹಳೆಯ ಹುತ್ತವಿದೆ. ದೇವಸ್ಥಾನದಲ್ಲಿ ಮೈಲಿಗೆ ಆದರೆ ಈ ಹುತ್ತದಲ್ಲಿನ ಹಾವು ಬಂದು ಎಚ್ಚರಿಕೆ ಕೊಡುತ್ತದೆ ಎಂಬುದು ಇಲ್ಲಿನ ನಂಬಿಕೆ. ದೇವಸ್ಥಾನದ ಹೊರಾಂಗಣದಲ್ಲಿ ವಸಂತ ಮಂಟಪವಿದ್ದು, ಎಡಭಾಗದಲ್ಲಿ ವ್ಯಾಘ್ರ ಚಾಮುಂಡಿ ಮತ್ತು ಬಲಭಾಗದಲ್ಲಿ ಬಬ್ಬರ್ಯ ದೈವವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ 13-14 ನೇ ಶತಮಾನದ ತುಳುಲಿಪಿ ಮತ್ತು ಭಾಷೆಯ ದಾನ ಶಾಸನವಿದೆ.
2012 ರಲ್ಲಿ ದೇವಸ್ಥಾನ ದ ಬ್ರಹ್ಮಕಲಶವನ್ನು ನಡೆಸಲಾಗಿದ್ದು, ವರ್ಷಾವಧಿ ಉತ್ಸವವು ಧನುರ್ ಸಂಕ್ರಮಣದಂದು ಧ್ವಜಾರೋಹಣದೊಂದಿಗೆ ಆರಂಭಗೊಂಡು ಐದು ದಿನಗಳವರೆಗೆ ವಿಜೃಂಭಣೆಯಿಂದ ನಡೆಯುತ್ತದೆ. ಆರನೇ ದಿನದಂದು ವ್ಯಾಘ್ರ ಚಾಮುಂಡಿಯ ನೇಮೋತ್ಸವವು ನಡೆಯುತ್ತದೆ.
ಸಂಗ್ರಹ: ಪ್ರತಿಜ್ಞ, ಪೂಜಾ, ಮಮತ. (ಬಿ.ಎ ವಿದ್ಯಾರ್ಥಿನಿಯರು) ಎಂ.ಎಸ್.ಆರ್.ಎಸ್ ಕಾಲೇಜು ಶಿರ್ವ