ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಸುಮಾರು 22 ಕಿ.ಮೀ ದೂರದಲ್ಲಿರುವ ಗ್ರಾಮವೇ ಇನ್ನ. ಈ ಗ್ರಾಮದಲ್ಲಿರುವ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಾಲಯವು ತನ್ನದೇ ಆದ ಕ್ಷೇತ್ರ ಐತಿಹ್ಯವನ್ನು ಹೊಂದಿದೆ.
ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಶಾಂಭವಿ ನದಿಯ ದಡದಲ್ಲಿರುವ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಾಲಯವು, ಇನ್ನ ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ.
ದಂತಕಥೆಯ ಪ್ರಕಾರ ಭಾರ್ಗವ ಋಷಿಯು ಹತ್ತಿರದ ಬೆಟ್ಟದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದಾಗ ಸಂತೋಷಗೊಂಡ ಶಿವನು ಭಾರ್ಗವನನ್ನು ಆಶೀರ್ವದಿಸಿ ಕೈಲಾಸದಿಂದ ಕೆಳಗಿಳಿದು ಬಂದು ಲಿಂಗದ ರೂಪದಲ್ಲಿ ಇರುವುದಾಗಿ ವರವನ್ನು ನೀಡಿದನು. ಹಾಗಾಗಿ ಈ ದೇವಸ್ಥಾನವು ಹುಟ್ಟಿಕೊಂಡಿತು ಎಂಬ ಪ್ರತೀತಿ ಇದೆ. ಇಂದಿಗೂ ಸಹ ಬಹುಪಾಲು ಭಾರ್ಗವ ಗೋತ್ರದ ಕುಟುಂಬಗಳಿಗೆ ಇನ್ನ ಮಹಾಲಿಂಗೇಶ್ವರ ಹಾಗೂ ದುರ್ಗಾಪರಮೇಶ್ವರಿ ಕುಲದೇವರಾಗಿದ್ದಾರೆ. ಶಿಲಾಮಯವಾಗಿರುವ ಗರ್ಭಗುಡಿಯಲ್ಲಿ ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುತ್ತಿದ್ದು, ಇದಕ್ಕೆ ಅಭಿಮುಖವಾಗಿ ನಂದಿ ವಿಗ್ರಹವನ್ನು ನೋಡಬಹುದು.
ಗರ್ಭಗುಡಿಯ ನಂತರದಲ್ಲಿ ತೀರ್ಥ ಮಂಟಪವಿದೆ. ತುಳುನಾಡಿನ ಹೆಚ್ಚಿನ ದೇವಾಲಯಗಳಲ್ಲಿ ಕಂಡು ಬರುವಂತೆ ಇಲ್ಲಿಯು ಸಹ ನೈಋತ್ಯ ದಿಕ್ಕಿನಲ್ಲಿ ಗಣಪತಿ ಗುಡಿಯನ್ನು ನೋಡಬಹುದು. ಈ ಗುಡಿಯ ಎಡಬದಿಯಲ್ಲಿ ಸಾಸ್ತಾರ ಗುಡಿ (ಅಯ್ಯಪ್ಪ ದೇವರ ಗುಡಿ) ಇದ್ದು, ದೇವಸ್ಥಾನ ಪ್ರವೇಶಿಸುವಾಗ ಎಡ ಭಾಗದಲ್ಲಿ ವರಾಹಿ ಗುಡಿ (ಪಂಜುರ್ಲಿ ಗುಡಿ) ಇದೆ. ದೇವಾಲಯದ ಒಳಭಾಗದಲ್ಲಿ ಒಂದು ಬಾವಿ ಹಾಗೂ ತುಳಸಿ ಕಟ್ಟೆಯನ್ನು ಕಾಣಬಹುದು. ದೇವಾಲಯದ ಹೊರಭಾಗದಲ್ಲಿ ಹೋಮಗಳನ್ನು ಮಾಡಲು ಮಂಟಪವಿದ್ದು, ದೇವಾಲಯದ ಸುತ್ತಲೂ ಉದ್ಯಾನವನವನ್ನು ಕಾಣಬಹುದು. ಈ ದೇವಾಲಯವು 2006 ರಲ್ಲಿ ಜೀರ್ಣೋದ್ಧಾರಗೊಂಡಿದೆ.
ಸಂಗ್ರಹ: ವೇದ್ಯಾಶ್ರೀ
ದ್ವಿತೀಯ ಬಿ.ಎ ವಿದ್ಯಾರ್ಥಿನಿ
ಎಂ.ಎಸ್.ಆರ್.ಎಸ್ ಕಾಲೇಜು ಶಿರ್ವ