ಉಡುಪಿ, ಅ.16: ಬ್ರಹ್ಮಾವರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬದ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ನೋಂದಣಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ದಿನಂಪ್ರತಿ ನೂರಾರು ಮಂದಿ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಉಪ ನೋಂದಣಾಧಿಕಾರಿಯವರಲ್ಲಿ ವಿಚಾರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹಳೆ ಕಚೇರಿಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಜನಸಾಮಾನ್ಯರಿಗೆ ಕಷ್ಟವಾಗುತ್ತಿದ್ದು, ತಕ್ಷಣವೇ ನೂತನ ಬ್ರಹ್ಮಾವರ ತಾಲೂಕು ಸೌಧಕ್ಕೆ ಸ್ಥಳಾಂತರಿಸುವಂತೆ ತಿಳಿಸಿದರು. ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿಗಳ ಆದಾಯ ತರುವ ನೋಂದಣಿ ಪ್ರಕ್ರಿಯೆಯ ಬಗ್ಗೆ ಇಲಾಖೆ ಸರ್ವರ್ ದೋಷ ಸಹಿತ ವಿವಿಧ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಸರ್ಕಾರ ಕೂಡಲೇ ಈ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸುಧೀರ್ ಶೆಟ್ಟಿ, ರಘುಪತಿ ಬ್ರಹ್ಮಾವರ, ಸಚಿನ್ ಪೂಜಾರಿ, ರಾಜು ಪೂಜಾರಿ, ಸಂತೋಷ್ ಜತ್ತನ್, ಗಣೇಶ್ ಕುಲಾಲ್, ಪ್ರದೀಪ್ ಬೈಕಾಡಿ ಮೊದಲಾದವರು ಉಪಸ್ಥಿತರಿದ್ದರು.