ಮಣಿಪಾಲ, ಅ.15: ಇಂಡಿಯನ್ ಬ್ಯೂರೋ ಆಫ್ ಅಡ್ಮಿನಿಸ್ಟ್ರೇಟರ್ಸ್ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಡಿಪಾರ್ಟ್ಮೆಂಟ್ ಓಫ್ ಕಾಮರ್ಸ್ ವಿಭಾಗದವರು ಜಂಟಿಯಾಗಿ ಪ್ರಸ್ತುತಪಡಿಸಿದ ‘ಐ-ಟಾಕ್’ ನ ಎರಡನೇ ಆವೃತ್ತಿಯು ಮಣಿಪಾಲದಲ್ಲಿ ಸಂಪನ್ನಗೊಂಡಿತು. ‘ಐ-ಟಾಕ್’ ಆವೃತ್ತಿಯು ಚಿಂತಕರು, ಸಾಧಕರು, ಉದ್ಯಮಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತಮ್ಮ ಅನುಭವಗಳನ್ನು ಮತ್ತು ಜ್ಞಾನವನ್ನು ಹಂಚಿಕೊಳ್ಳುವ ಒಂದು ವೇದಿಕೆಯಾಗಿದ್ದು, ಮುಂದಿನ ಪೀಳಿಗೆಯ ನಾಯಕರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ನಿರ್ದೇಶಕರಾದ ಕಮಾಂಡರ್ ಡಾ. ಅನಿಲ್ ರಾಣಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಾಂತ್ರಿಕ ಭೂದೃಶ್ಯದಲ್ಲಿ ನಾಯಕತ್ವವು ಬಹುಮುಖತೆ, ನಮ್ಯತೆ, ಹೊಂದಿಕೊಳ್ಳುವಿಕೆ ಮತ್ತು ದೂರದೃಷ್ಟಿಯನ್ನು ಬಯಸುತ್ತದೆ. ಬದಲಾವಣೆಯನ್ನು ಅಳವಡಿಸಿಕೊಳ್ಳುವುದು ಈಗ ಪರಿಣಾಮಕಾರಿ ನಾಯಕರ ಲಕ್ಷಣವಾಗಿದೆ ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ತಜ್ಞ, ಕಲಾವಿದ, ಚಿಂತಕ ಡಾ. ಎಂ. ಪ್ರಭಾಕರ ಜೋಶಿಯವರ ದಿಕ್ಸೂಚೀ ಭಾಷಣದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ, ಕೆ.ಎಂ.ಸಿ ಮಣಿಪಾಲದ ಪ್ರಾಧ್ಯಾಪಕ ಹಾಗೂ ಉಸಿರಾಟ ಸಂಬಂಧಿ ಔಷಧ ವಿಭಾಗದ ಮುಖ್ಯಸ್ಥ ಡಾ. ರಾಹುಲ್ ಮ್ಯಾಗಜೀನ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಾದ ಮನೀಶ್ ಥಾಮಸ್ (ಮಣಿಪಾಲ್ ಜಿ.ಓ.ಕೆ. ಬಯೋ ಇನ್ಕ್ಯುಬೇಟರ್ನ ಸಿ.ಇ.ಒ.), ಡಾ.ರಚನಾ (ಎಮರ್ಜೆನ್ಸಿ ಮೆಡಿಸಿನ್ನ ತಜ್ಞೆ, ಕೆಎಂಸಿ ಮಣಿಪಾಲ), ನವನೀತ್ ಗಣೇಶ್ (ವಿದ್ವಾಂಸರು, ಐ.ಐ.ಎಸ್.ಸಿ), ಶ್ರೀಪತಿ ರಂಗಾ ಭಟ್ (ಸಂಶೋಧಕರು, ಎಂ ಐ ಟಿ, ಮಣಿಪಾಲ) ಮತ್ತು ಹೆಸರಾಂತ ಸಿನಿ ಕಲಾವಿದರಾದ ವೇಣುಮಾಧವ್ ಭಟ್ ಎಂ. ಇವರುಗಳ ಉಪನ್ಯಾಸ ಮಾಲಿಕೆಯೊಂದಿಗೆ ಸಂಪನ್ನಗೊಂಡಿತು.
ಡಿ.ಓ.ಸಿ ಮಣಿಪಾಲದ ಮುಖ್ಯಸ್ಥರಾದ ಡಾ. ಸಂದೀಪ್ ಶೆಣೈ ಸ್ವಾಗತಿಸಿದರು. ಐ.ಬಿ.ಎ.ಟಿ ಅಧ್ಯಕ್ಷರು ಮತ್ತು ಚಾರ್ಟರ್ಡ್ ಅಕೌಂಟೆಂಟ್ ಕೆ. ರಾಜಾರಾಮ್ ಶೆಟ್ಟಿ ಅವರು ಐ.ಬಿ.ಎ.ಟಿ ನ ಉಪಕ್ರಮಗಳು ಮತ್ತು ಐ-ಟಾಕ್ ನ ಪ್ರಾಶಸ್ತ್ಯದ ಬಗ್ಗೆ ಮಾತನಾಡಿದರು. ಡಾ.ದಶರಥರಾಜ್ ಕೆ.ಶೆಟ್ಟಿ ವಂದಿಸಿದರು. ಡಾ. ಎವೆರಿಲ್ ಫೆರ್ನಾಂಡಿಸ್ ಮತ್ತು ವಿಟ್ಠಲ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಸಾದ್ ರಾವ್, ಡಾ. ವಿಕ್ರಮ್ ಬಾಳಿಗಾ, ಡಾ. ರೀಟಾ ರಾಣಿ ಚೋಪ್ರಾ, ಮತ್ತು ಡಾ. ಅಂಬಿಗೈ ರಾಜೇಂದ್ರನ್ ಸೇರಿದಂತೆ ಸಂಘಟನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.