ಬ್ರಹ್ಮಾವರ, ಅ.13: ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಒಂದು ದಿನದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಕೆ. ಸುರೇಶ್ ಮಾತನಾಡಿ, ಇಂದಿನ ಸ್ಥಿತಿಯಲ್ಲಿ ಸಮಾಜದ ಎಲ್ಲಾ ಸ್ಥರದ ವ್ಯಕ್ತಿಗಳಿಗೆ ಪ್ರಥಮ ಚಿಕಿತ್ಸಾ ತರಬೇತಿಯ ಅಗತ್ಯತೆಯಿದೆ ಎಂದರು. ಕಾಲೇಜಿನ ವಿದ್ಯಾರ್ಥಿಗಳು ತಾವು ಅರಿತ ಪ್ರಥಮ ಚಿಕಿತ್ಸಾ ವಿಧಾನವನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುವುದರ ಮೂಲಕ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಬದುಕಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಮೇಶ ಆಚಾರ್ ಮಾತನಾಡಿ, ಪ್ರಥಮ ಚಿಕಿತ್ಸಾ ತರಬೇತಿ ಅಗತ್ಯತೆಗಳನ್ನು ವಿವರಿಸುತ್ತಾ ಮನುಷ್ಯನ ಬದುಕು ಸಮಾಜದಲ್ಲಿ ಹೇಗೆ ಉಪಯುಕ್ತವಾಗಬೇಕೆಂದು ವಚನಗಳ ಸಾಲುಗಳೊಂದಿಗೆ ವಿವರಿಸಿದರು. ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಅಧಿಕಾರಿ ಶೋಭಾ ಆರ್ ಸ್ವಾಗತಿಸಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ವಿದ್ಯಾ ಪಿ., ಹಾಗೂ ವಿದ್ಯಾರ್ಥಿ ಪ್ರತಿನಿಧಿ ದರ್ಶನ್ ಉಪಸ್ಥಿತರಿದ್ದರು. ತೃತೀಯ ಬಿ.ಸಿ.ಎ. ವಿದ್ಯಾರ್ಥಿನಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ೧೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.