ಮಣಿಪಾಲ, ಅ.13: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಮಣಿಪಾಲ ಮಣ್ಣಪಳ್ಳ ಕೆರೆಯಲ್ಲಿ ಮೀನು ಮರಿ ಬಿತ್ತನೆಗೆ ಫೆಡರೇಷನ್ ಅಧ್ಯಕ್ಷರಾದ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೆರೆಗಳಲ್ಲಿ ಮೀನು ಸಾಕಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ವತಿಯಿಂದ ಯೋಜನೆ ರೂಪಿಸಿದ್ದು, ಈ ಮೂಲಕ ಜಿಲ್ಲೆಯ ಯುವಜನತೆಗೆ ಉದ್ಯೋಗಾವಕಾಶ ಸೃಷ್ಠಿಗೆ ಫೆಡರೇಶನ್ ಮುಂದಾಗಲಿದೆ ಎಂದರು. ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯ ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಜಿಲ್ಲಾಡಳಿತದ ವತಿಯಿಂದ ಸಂಪೂರ್ಣ ಸಹಕಾರದ ಆಶಯ ವ್ಯಕ್ತಪಡಿಸಿದರು. ಫೆಡರೇಶನ್ ವತಿಯಿಂದ ಮಣ್ಣಪಳ್ಳ ಕೆರೆಗೆ ಸುಮಾರು 40 ಸಾವಿರ ಕಾಟ್ಲಾ, ರೋಹು ಸಹಿತ ವಿವಿಧ ಪ್ರಬೇಧದ ಮೀನು ಮರಿಗಳನ್ನು ಬಿತ್ತನೆ ಮಾಡಲಾಯಿತು.
ಮೀನು ಮಾರಾಟ ಫೆಡರೇಶನ್ ನಿರ್ದೇಶಕರಾದ ರಾಮಚಂದ್ರ ಕುಂದರ್, ಸುರೇಶ್ ಸಾಲ್ಯಾನ್, ನಗರಸಭಾ ಸದಸ್ಯರಾದ ಕಲ್ಪನಾ ಸುಧಾಮ, ಫೆಡರೇಶನ್ ವ್ಯವಸ್ಥಾಪಕ ನಿರ್ದೇಶಕರಾದ ದರ್ಶನ, ಕಾರ್ಯದರ್ಶಿ ದೇವಯಾನಿ, ಫೆಡರೇಶನ್ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು.