ಮಣಿಪಾಲ, ಅ.10: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ನ ಪೀಡಿಯಾಟ್ರಿಕ್ ಹೆಮಟಾಲಜಿ ಮತ್ತು ಆಂಕೊಲಾಜಿ ಅಧ್ಯಾಯದ ಸಹಯೋಗದೊಂದಿಗೆ ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗವು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಇಂಟರಾಕ್ಟ್ ಬಿಲ್ಡಿಂಗ್ನಲ್ಲಿ ರಾಷ್ಟ್ರೀಯ ತರಬೇತಿ ಕಾರ್ಯಕ್ರಮ -ಪ್ರಾಕ್ಟಿಕಲ್ ಪೀಡಿಯಾಟ್ರಿಕ್ ಆಂಕೊಲೋಜಿಯನ್ನು ಆಯೋಜಿಸಿತ್ತು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಅರ್ಚನಾ ಎಂ ವಿ., ಸಹಾಯಕ ಪ್ರಾದ್ಯಾಪಕರು, ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗ ಮಣಿಪಾಲ ಅವರು ಕಾರ್ಯಾಗಾರದ ಕುರಿತು ಸಂಕ್ಷಿಪ್ತ ಅವಲೋಕನವನ್ನು ನೀಡಿದರು. ಕಾರ್ಯಾಗಾರವು ಉಪನ್ಯಾಸಗಳು ಮತ್ತು ಪ್ರಾಯೋಗಿಕ ಕೌಶಲ್ಯ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಮಕ್ಕಳಲ್ಲಿ ಮಾಡುವ ಚಿಕಿತ್ಸಾ ಕಾರ್ಯವಿಧಾನ ಮತ್ತು ಸೆಂಟ್ರಲ್ ವೇನಸ್ ಕ್ಯಾಥೆಟರ್ ಅಳವಡಿಕೆಯ ಪ್ರತಿನಿಧಿಗಳಿಗೆ ತರಬೇತಿ ನೀಡಲಾಯಿತು.
ಕಾರ್ಯಾಗಾರದಲ್ಲಿ 70ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ಮಕ್ಕಳ ಆಂಕೊಲಾಜಿಯಲ್ಲಿನ ವಿವಿಧ ವಿಷಯಗಳ ಕುರಿತು ವ್ಯಾಪಕ ಚರ್ಚೆ ನಡೆಯಿತು. ಕಾರ್ಯಾಗಾರದಲ್ಲಿ ಭಾರತದಾದ್ಯಂತದ ಪ್ರತಿಷ್ಠಿತ ಸಂಸ್ಥೆಗಳಾದ ರೀಜನಲ್ ಕ್ಯಾನ್ಸರ್ ಸೆಂಟರ್, ತಿರುವನಂತಪುರ, ನಾರಾಯಣ ಆಸ್ಪತ್ರೆ, ಬೆಂಗಳೂರು, ಮಲಬಾರ್ ಕ್ಯಾನ್ಸರ್ ಸೆಂಟರ್, ತಲಸ್ಸೆರಿ, ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ, ಬೆಂಗಳೂರು ಮತ್ತು ಸೇಂಟ್ ಜಾನ್ಸ್ ಆಸ್ಪತ್ರೆ-ಬೆಂಗಳೂರು ಇಲ್ಲಿನ ಉಪನ್ಯಾಸಕರು ಭಾಗವಹಿಸಿದ್ದರು.
ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲೋಜಿ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಭಟ್ ಕೆ ಮಾತನಾಡಿ, ಇಂತಹ ಕಾರ್ಯಾಗಾರಗಳು ಸ್ನಾತಕೋತ್ತರ ಶಿಕ್ಷಣಾರ್ಥಿಗಳಿಗೆ ಈ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಲು ಅವಕಾಶವನ್ನು ನೀಡುತ್ತದೆ ಎಂದರು.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮಾತನಾಡಿ, ಈ ಕಾರ್ಯಾಗಾರವು ಮಕ್ಕಳ ವೈದ್ಯರಿಗೆ ಹಾಗೂ ಸ್ನಾತಕೋತ್ತರ ಶಿಕ್ಷಣಾರ್ಥಿಗಳಿಗೆ ಮಕ್ಕಳ ಆಂಕೊಲಾಜಿಯಲ್ಲಿ ತಮ್ಮ ಜ್ಞಾನವನ್ನು ನವೀಕರಿಸಲು ಮತ್ತು ಕಲಿಯಲು ಅವಕಾಶ ಮಾಡಿಕೊಡುತ್ತದೆ ಎಂದರು.