ಮಂಗಳೂರು, ಅ.7: ಮಂಗಳೂರು ರಥಬೀದಿಯ ಡಾ. ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್, ರೋವರ್- ರೇಂಜರ‍್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋಗೋಲ್ಡ್ ಹಾಗೂ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಅರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ದಕ್ಷಿಣ ಶಾಸಕರಾದ ಡಿ.ವೇದವ್ಯಾಸ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಒತ್ತಡ ಸಮಯದಲ್ಲಿ ಬಹುದೂರದಿಂದ ಕಾಲೇಜಿಗೆ ಬರುತ್ತಾರೆ. ಜೊತೆಗೆ ಕೆಲವೊಂದು ವಿದ್ಯಾರ್ಥಿಗಳು ತಮ್ಮದೇ ಆದ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಇಂತಹ ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ನೆರವಾಗುವುದರಲ್ಲಿ ಸಂಶಯವಿಲ್ಲ. ವಿದ್ಯಾರ್ಥಿಗಳು ಮಾನಸಿಕವಾಗಿಯೂ ಸದೃಢರಾಗಿರಬೇಕು ಎಂಬ ಕಿವಿಮಾತಿನ ಜೊತೆಗೆ ರಕ್ತದಾನದ ಕುರಿತಾದ ತಮ್ಮ ಅನುಭವಗಳನ್ನು
ಹಂಚಿಕೊಂಡರು. ಇಂತಹ ವಿದ್ಯಾರ್ಥಿ ಪರವಾದ ಕಾರ್ಯಕ್ರಮಗಳು ನಿರಂತರವಾಗಿ ಸಾಗಬೇಕು ಎಂದು ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಲಯನ್ಸ್ ಕ್ಲಬ್ ಮಂಗಳೂರು, ಮೆಟ್ರೋ ಗೋಲ್ದ್ ಅಧ್ಯಕ್ಷರಾದ ಎಲ್.ಎನ್.ಕೆ ಸದಾನಂದ ಉಪಧ್ಯಾಯ, ಎಲ್.ಎನ್.ಜೆ.ನಾಗೇಶ್, ಎಮ್‌ಜೆಎಫ್, ಲಯನ್ಸ್ ಕ್ಲಬ್ ಸಿಬ್ಬಂದಿಗಳು ಹಾಗೂ ಸಹಾಯಕರು, ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಡಾ. ರಂಜಿತ ರಾವ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಸಹಾಯಕರು, ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ರೋವರ್-ರೇಂಜರ‍್ಸ್, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರು ಮತ್ತು ಯೋಜನಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ಬೋಧಕರು ಹಾಗೂ ಲಯನ್ಸ್ ಸದಸ್ಯರು ಸೇರಿ ಒಟ್ಟು ೧೦೧ ಮಂದಿ ರಕ್ತದಾನ ಮಾಡಿದರು. ಸುಮಾರು ೩೫೦ ವಿದ್ಯಾರ್ಥಿಗಳು ಆರೋಗ್ಯ ತಪಾಸಣಾ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು. ಧನ್ಯ ಸ್ವಾಗತಿಸಿ, ನಿವೇದಿತಾ ವಂದಿಸಿದರು. ಕವನಾ ಕಾರ್ಯಕ್ರಮ ನಿರೂಪಿಸಿದರು.