ಕೋಟ, ಅ. 5: ಕಾರಂತ ಥೀಮ್ ಪಾರ್ಕ್ನಲ್ಲಿ ಸಿನಿಮೋತ್ಸವ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ. ಕರಾವಳಿ ಭಾಗದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮೂಲಕ ಇಲ್ಲಿನ ಪ್ರತಿಭೆಗಳು ಸಿನಿಮಾ ಲೋಕಕ್ಕೆ ಲಗ್ಗೆ ಇಡಲು ಸಾಧ್ಯ, ಇಂತಹ ಪ್ರೋತ್ಸಾಹಕ ಕಾರ್ಯಕ್ರಮಗಳಿಂದ ಪ್ರತಿಭೆ ಅನಾವರಣ ಜೊತೆಗೆ ಕರಾವಳಿಯ ಸಂಸ್ಕೃತಿಗಳು ಇನ್ನಷ್ಟು ಪಸರಿಸಲು ಸಾಧ್ಯ ಎಂದು ನಿರ್ದೇಶಕ ಶ್ರೀಧರ್ ಉಡುಪ ಹೇಳಿದರು. ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ)ಉಡುಪಿ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ(ರಿ)ಕೋಟ ಆಶ್ರಯದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 19 ನೇ ವರ್ಷದ ಸಂಭ್ರಮ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂಪನ-2023(ಸಂಗೀತ ಸಂಪುಟದ ಸಂಚಲನ) ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಚಲನಚಿತ್ರ ಉತ್ಸವ,ಸಂವಾದ ಮಾತುಕತೆ ಹಾಗೂ ಕಾರಂತ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ ಮಾತನಾಡಿ, ಕರಾವಳಿ ಭಾಗದ ಜನರು ಸಿನಿಮಾ ರಂಗಕ್ಕೆ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವುದು ಸಂತಸದ ವಿಷಯ, ಥೀಮ್ ಪಾರ್ಕ್ನಲ್ಲಿ ಇನ್ನಷ್ಟೂ ಯುವ ಪ್ರತಿಭೆಗಳಿಗೆ ಸಹಕಾರಿಯಾಗಬಲ್ಲ ಕಾರ್ಯಕ್ರಮ ಆಯೋಜಿಸುವ ಯೋಜನೆ ಹಾಕಲಾಗುವುದೆಂದು ಹೇಳಿದರು. ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ, ಸದಸ್ಯ ವಾಸು ಪೂಜಾರಿ, ಕಾರ್ಯದರ್ಶಿ ಸುಮತಿ ಅಂಚನ್, ಕುಂಭಾಶಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ, ಸ.ಹಿ.ಪ್ರಾ.ಶಾಲೆ ಕೋಟ ಮುಖ್ಯೋಪಾಧ್ಯಾಯಿನಿ ಪುಷ್ಪವತಿ ಉಪಸ್ಥಿತರಿದ್ದರು. ಶಿಕ್ಷಕ ನಾಗೇಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ನಂತರ ಸ.ಹಿ.ಪ್ರಾ.ಶಾಲೆ ಕೋಟ ವಿದ್ಯಾರ್ಥಿಗಳಿಂದ ಕಾರಂತ ದರ್ಶನ ಹಾಗೂ ಮಾಡರ್ನ್ ಮಹಾಭಾರತ ಸಿನಿಮಾ ಪ್ರದರ್ಶನ ನಡೆಯಿತು.