ಮುಂಬಯಿ, ಸೆ. 27: ಭಾರತ್ ಕೋ ಆಪರೇಟಿವ್ ಬ್ಯಾಂಕ್ ಲಿ. ಇದರ ಮುಂಬೈ ಪ್ರಧಾನ ಕಚೇರಿಗೆ ಉಡುಪಿ ಶಾಸಕ ಸಹಕಾರಿ ಮುಖಂಡ ಯಶ್ಪಾಲ್ ಸುವರ್ಣ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಮುಂಬೈನಲ್ಲಿ ಬದುಕು ಕಟ್ಟಿಕೊಂಡಿದ್ದ ಬಿಲ್ಲವ ಸಮುದಾಯದ ಹಿರಿಯರ ದೂರದೃಷ್ಟಿಯ ಕಲ್ಪನೆ ಹಾಗೂ ಪ್ರಾಮಾಣಿಕ ಗ್ರಾಹಕ ಸ್ನೇಹಿ ಸೇವೆಯ ಧ್ಯೇಯದೊಂದಿಗೆ 1978 ರಲ್ಲಿ ಪ್ರಾರಂಭಗೊಂಡ ಭಾರತ್ ಬ್ಯಾಂಕ್ ಕಳೆದ 45 ವರ್ಷಗಳಲ್ಲಿ ನಿರಂತರ ಪ್ರಗತಿ ಸಾಧಿಸಿ ಪ್ರಸ್ತುತ 103 ಶಾಖೆಗಳನ್ನು ಹೊಂದಿ ವ್ಯವಹಾರ ನಡೆಸುವ ಮೂಲಕ ಸಮಸ್ತ ತುಳುನಾಡಿನ ಜನರ ಹೆಮ್ಮೆಯ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ ಎಂದರು. ಮಹಾರಾಷ್ಟ್ರ, ಗುಜರಾತ್, ಕರ್ನಾಟಕದಲ್ಲಿ ನೆಲೆನಿಂತ ಕರಾವಳಿಗರಿಗೆ ತನ್ನ ಶಾಖೆಗಳ ಮೂಲಕ ವಿಶೇಷವಾಗಿ ಆರ್ಥಿಕ ಸಹಕಾರ ನೀಡುವ ಕಾರ್ಯ ನಿರಂತರವಾಗಿ ಭಾರತ್ ಬ್ಯಾಂಕ್ ಮೂಲಕ ಸಾಗಿ ಬರಲಿ ಎಂದು ಹಾರೈಸಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾನಂದ ಎಸ್. ಕರ್ಕೇರ, ಹಿರಿಯ ಅಧಿಕಾರಿಗಳಾದ ದಿನೇಶ್ ಬಿ. ಸಾಲ್ಯಾನ್, ವಿಶ್ವನಾಥ ಜಿ. ಸುವರ್ಣ, ಮಹೇಶ್ ಬಿ. ಕೋಟ್ಯಾನ್, ಜನಾರ್ಧನ ಎಂ. ಪೂಜಾರಿ ಹಾಗೂ ಕೇಂದ್ರ ಕಛೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.