ಕಾರ್ಕಳ, ಸೆ. 26: ವಿದ್ಯಾರ್ಥಿದೆಸೆಯಲ್ಲಿ ಪಠ್ಯೇತರ ಸೃಜನಶೀಲ ಕಲಿಕೆಗೆ, ಹಲವು ಅವಕಾಶಗಳ ವೇದಿಕೆ ಎನ್.ಎಸ್.ಎಸ್. ಎಂದು ಮಂಗಳೂರು ಎನ್.ಎಸ್.ಎಸ್. ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಹೇಳಿದರು. ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ‘ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಪಠ್ಯ ಚಟುವಟಿಕೆಗಳ ಪ್ರಪಂಚದ ಜೊತೆಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣವನ್ನು ಹೇಗೆ ಕಲಿಸುತ್ತದೆ ಎಂದು ತಮ್ಮ ಕಾರ್ಯಕ್ರಮಾಧಿಕಾರಿ, ವಿಭಾಗಾಧಿಕಾರಿ ಅನುಭವಗಳ ನೆಲೆಯಲ್ಲಿ ಹಲವು ನಿದರ್ಶನಗಳ ಮೂಲಕ ಹೇಳಿದರು. ಎನ್.ಎಸ್.ಎಸ್. ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಹಲವು ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಹಾಗೂ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಓ. ದಿನೇಶ್ ಎಂ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.
ಉಪ ಪ್ರಾಂಶುಪಾಲರಾದ ಸಾಹಿತ್ಯ, ಎನ್.ಎಸ್.ಎಸ್. ವಿದ್ಯಾರ್ಥಿ ನಾಯಕಿ ಸಮಿಯ ಹೆಗ್ಡೆ ವೇದಿಕೆಯಲ್ಲಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರವಿ ಜಿ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕಿ ಸುಮಿತ್ರಾ ವಂದಿಸಿ, ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.