ಉಡುಪಿ, ಸೆ. 23: ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಸಾರ್ವಜನಿಕರಿಗೆ ಶುದ್ಧ ಬೆಲ್ಲದಿಂದ ತಯಾರಿಸಿದ ಲಾಡುಗಳನ್ನು ವಿತರಿಸಲಾಯಿತು.
ಗಣೇಶ ಚತುರ್ಥಿಯ ದಿವಸದಂದು ಪರಿಸರ ಸ್ನೇಹಿ ಬೆಲ್ಲದ ಗಣಪತಿಯನ್ನು ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಪ್ರಧಾನಿ ಮೋದಿಯವರ ಜನ್ಮದಿನದ ಸವಿನೆನಪಿಗಾಗಿ ಪ್ರದರ್ಶಿಸಿದ್ದರು. ಪ್ರದರ್ಶನ ಮುಗಿದ ಬಳಿಕ ಗಣಪತಿ ಮೂರ್ತಿಗೆ ತಗುಲಿದ ಅಂದಾಜು 50 ಕೆಜಿ ಬೆಲ್ಲದಿಂದ ನಾಲ್ಕು ಬಗೆಯ ಸಿಹಿ ತಿಂಡಿ ಮಾಡಿ ಸಾರ್ವಜನಿಕರಿಗೆ ವಿತರಿಸಲಾಯಿತು.
ಒಣಕೊಬ್ಬರಿ, ಗುಂಡಿಟ್ಟು, ಹರಳುಡಿ. ಎಳ್ಳು, ಏಲಕ್ಕಿ, ಬಾದಾಮಿ, ತುಪ್ಪ ಸೇರಿಸಿ ಪಾಕತಜ್ಞ ಗುರುರಾಜ್ ಆಚಾರ್ಯ ಕಿನ್ನಿಮುಲ್ಕಿ ತಯಾರಿಸಿದ ಸುಮಾರು ಎರಡು ಸಾವಿರ ನಾಲ್ಕು ವಿಧದ ಲಾಡುಗಳನ್ನು ನಿತ್ಯಾನಂದ ಒಳಕಾಡು ಸಾರ್ವಜನಿಕರಿಗೆ ವಿತರಿಸಿದರು.