ನನ್ನ ಯಜಮಾನರಿಗೆ ಹೊಸ ಹೊಸ ತಾಣಗಳನ್ನು ಭೇಟಿ ನೀಡುವ ಆಸಕ್ತಿ. ನನಗೆ ಹೋದ ಕಡೆಯಲ್ಲೆಲ್ಲಾ ವಿಡಿಯೋ ಮಾಡುವ ಹುಮ್ಮನಸ್ಸು. ಆದ್ದರಿಂದ ನಾವು ಸಮಯವಕಾಶ ಸಿಕ್ಕಿದ್ದಾಗಲೆಲ್ಲ ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತೇವೆ. ಡಿಸೆಂಬರ್ 20020 ರ ಒಂದು ಭಾನವಾರ ಕೊಣಾಜೆಕಲ್ಲು ನೋಡಲು ಹೊರಟೆವು. ನಮ್ಮ ಕಾರಿನಲ್ಲೇ ಪ್ರಯಾಣ. ಬೆಳಿಗ್ಗೆ ಎಂಟು ಗಂಟೆಗೆ ಮನೆಯಿಂದ ಕಾಫಿ ಕುಡಿದು ಹೊರಟೆವು. ಕಾರ್ಕಳದಿಂದ ಮೂಡುಬಿದರಿ. ಮೂಡಬಿದ್ರೆಯಿಂದ 8 ಕಿಲೋಮೀಟರ್ ದೂರದಲ್ಲಿ ಇರುವುದು ಈ ಸ್ಥಳ. ಬೆಟ್ಟದ ಬುಡ ತಲುಪಿದಾಗ ಬೆಳಿಗ್ಗೆ 9 ಆಗಿತ್ತು. ನಾವು ಕಾರ್ ಪಾರ್ಕ್ ಮಾಡಿ ನಮ್ಮ ಹ್ಯಾಂಡ್ ಬ್ಯಾಗ್ ನಲ್ಲಿ ನೀರಿನ ಬಾಟಲಿಯನ್ನು ಹಿಡಿದು ಬೆಟ್ಟ ಹತ್ತಲು ಶುರು ಮಾಡಿದೆವು.
ಬೆಟ್ಟದ ಮೇಲೆ ಗುಹೆ ದೇವಸ್ಥಾನವಿದೆ. ಅಲ್ಲಿಗೆ ತಲುಪಲು ನಡೆದುಕೊಂಡೆ ಹೋಗಬೇಕು ಕಾಲುದಾರಿಯದೆ. ನಾವು ಹಿಂದೆ ಯಾವತ್ತೂ ಹೀಗೆ ಬೆಟ್ಟ ಹತ್ತಿರಲಿಲ್ಲ. ಜೀವನದಲ್ಲಿ ನಾವು ಹೊಸ ಹೊಸ ಅನುಭವಗಳನ್ನು ಮಾಡುತ್ತಿರಬೇಕು. ಹೊಸ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಇದುವೇ ಜೀವನ. ಮೇಲೆ ಹತ್ತುತ್ತಿದ್ದಂತೆ ತಂಪು ಗಾಳಿ , ಪ್ರಕೃತಿಯ ಮಡಿಲಲ್ಲಿ ಒಂದು ಸುಂದರ ಅನುಭವ. ಬೆಟ್ಟ ಹತ್ತಿ ಅಭ್ಯಾಸ ವಿಲ್ಲವಾದ್ದರಿಂದ ಮಧ್ಯ ಮಧ್ಯದಲ್ಲಿ ನಿಲ್ಲುತ್ತಿದ್ದೆ. ಇವರು ಮತ್ತು ಮಕ್ಕಳು ಮುಂದೆ ಹೋಗಿ ನಾನು ಬರುವುದನ್ನು ಕಾಯುತ್ತಿದ್ದರು. ನಾನು ಮಾತ್ರ ನನ್ನಷ್ಟಕ್ಕೆ ಫೋಟೋ ವಿಡಿಯೋ ಅಂತ ಹಿಂದೆ ಉಳಿಯುತ್ತಿದ್ದೆ. ಹಿತಕರವಾದ ವಾತಾವರಣವಿತ್ತು ಬಿಸಿಲಿದ್ದರೂ ಮರಗಳಿರುವ ಕಾರಣ ಬಿಸಿಲಿನ ಶಾಖದ ಅನುಭವವಾಗಲಿಲ್ಲ. ಶೀತಲ ಗಾಳಿ , ರಮಣಿಯ ನೋಟ ಹಸಿರು ವಾತಾವರಣ ಎಲ್ಲವು ಸೇರಿ ಪುಲಕಿತಗೊಳಿಸುತ್ತಿತ್ತು. ದಾರಿ ಮಧ್ಯದಲ್ಲಿ ಸಮತಟ್ಟಾದ ಸ್ಥಳದಲ್ಲಿ ಕುಳಿತು ಆಯಾಸವನ್ನು ದೂರ ಮಾಡಿದೆವು. ಬ್ಯಾಗಲ್ಲಿದ್ದ ಬಿಸ್ಕೆಟ್ ನೀರು ಕುಡಿದು ಸ್ವಲ್ಪ ಹೊತ್ತು ಕುಳಿತು ಪುನಃ ನಡೆದೆವು.
ಬೆಟ್ಟದ ಬುಡದಿಂದ ದೇವಸ್ಥಾನ ತಲುಪಲು ಸಾಧಾರಣ ಎರಡು ಕಿಲೋಮೀಟರ್ ದೂರವಿದೆ. ಇಲ್ಲಿ ಟ್ರಕ್ಕಿಂಗ್ ಮಾಡುವವರಿಗೆ ಬೇರೆ ದಾರಿ ಇದೆ. ಇದು ಟ್ರಕ್ಕಿಂಗ್ ಪ್ರಿಯರಿಗೆ ಪ್ರಮುಖವಾದ ಚಾರಣ ಸ್ಥಳ ಕೂಡ. ಬೆಟ್ಟದ ತುದಿಯಲ್ಲಿ ಎರಡು ಬೃಹದಾಕಾರದ ಕಲ್ಲು ಬಂಡೆಯನ್ನು ಕಾಣಬಹುದು. ಈ ಬಂಡೆಯನ್ನು ಕೊಣಜಿ ಕಲ್ಲು ಎಂದು ಹೆಸರು. ಬೆಟ್ಟದ ತುದಿ ತಲುಪಿದ ಮೇಲೆ ಕಾಲಭೈರವ ಹಾಗೂ ಮಹಾಮಾಯಿ ಗುಡಿ ಇದೆ. ಈ ಗುಡಿಯು ಗುಹೆಯೊಳಗೆ ಇದೆ. ಆ ಬೃಹತ್ ಗ್ರಾನೈಟ್ ಶಿಲೆಯ ತಳ ಭಾಗದಲ್ಲಿದೆ ಈ ಗುಹೆ ದೇವಾಲಯ. ದೇವಾಲಯದ ಮೇಲ್ಚಾವಣಿಯಾಗಿ ಈ ಬಂಡೆ ಇರುವುದು . ಇದು ನೈಸರ್ಗಿಕ ದೇವಸ್ಥಾನವೆನ್ನಬಹುದು. ಈ ದೇವಾಲಯವನ್ನು 1947ರಲ್ಲಿ ಸ್ಥಾಪಿಸಲಾಯಿತು. 108 ಯತಿಗಳ ಸಮಾಧಿ ಇದರಲ್ಲಿದೆ ಎಂದು ಹೇಳಲಾಗಿದೆ.
ಸುತ್ತಲೂ ಹಸಿರು ಕಾಡು ಕಣ್ಣಿಗೆ ಹಿತ ನೀಡುತ್ತದೆ. ನಾವು ಪ್ರಕೃತಿಯೊಂದಿಗೆ ಬೆರೆಯುತ್ತೇವೆ. ಅಷ್ಟೇ ಪ್ರಕೃತಿಯು ನಮ್ಮೊಂದಿಗೆ ಸೇರುತ್ತದೆ. ಮೇಲೆ ಹತ್ತಲು ಸಾಧಾರಣ ಮುಕ್ಕಾಲು ಗಂಟೆ ಬೇಕಾಗುತ್ತದೆ. ಕೆಳಗೆ ಇಳಿಯಲು ಅರ್ಧ ಗಂಟೆ ಸಾಕು. ದೇವರನ್ನು ನಮಸ್ಕರಿಸಿ ಹೊರಗೆ ಬರುವಾಗ ಅನೇಕ ಮಂಗಗಳು ನಮ್ಮನ್ನು ಸ್ವಾಗತಿಸುತ್ತಿದ್ದವು. ಮಂಗಗಳ ಆಟ ನೋಡಲು ಚಂದ. ಆದರೆ ನಮ್ಮ ಹತ್ತಿರ ಬಂದು ನಮ್ಮ ಬ್ಯಾಗನ್ನು ಕಸಿದುಕೊಂಡರೆ ಎನ್ನುವ ಭಯ. ನನ್ನ ಮೊಬೈಲನ್ನು ನನ್ನ ಸ್ಲಿಂಗ್ ಬ್ಯಾಗ್ ಒಳಗೆ ಸುರಕ್ಷಿತವಾಗಿಟ್ಟೆ. ಸ್ವಲ್ಪ ಹೊತ್ತು ಅಲ್ಲೇ ವಾನರನ್ನು ನೋಡಿ ಖುಷಿಪಟ್ಟೆವು. ಪ್ರಕೃತಿಯ ಜೊತೆ ಸಮಯ ಕಳೆದಷ್ಟು ಮನಸ್ಸು ನಿರಾಳವಾಗುತ್ತದೆ. ಧನ್ಯತಾಭಾವ ಮೂಡುತ್ತದೆ. ಈ ಧಾವಂತದ ಬದುಕಿನಲ್ಲಿ ಇಂತಹ ರಮ್ಯ ಮನೋಹರ ಸ್ಥಳಗಳಿಗೆ ಭೇಟಿ ನೀಡುವುದು ದೇಹಕ್ಕೂ ಮನಸ್ಸಿಗೂ ಶಾಂತತೆಯನ್ನು ನೀಡುತ್ತದೆ.
-ಡಾ. ಹರ್ಷಾ ಕಾಮತ್