ಮಂಡ್ಯ, ಸೆ. 21: ಪ್ರತಿನಿತ್ಯ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ. ತೀರ್ಪು ಹೊರಬರುತ್ತಿದ್ಧಂತೆ ಮಂಡ್ಯದಲ್ಲಿ ರೈತರು ಮತ್ತು ಕನ್ನಡ ಪರ ಸಂಘಟನೆಗಳ ಹೋರಾಟ ತೀವ್ರಗೊಂಡಿದ್ದು, ಪ್ರತಿಭಟನಾಕಾರರು ಹಲವು ಕಡೆಗಳಲ್ಲಿ ರಸ್ತೆ ತಡೆ ನಡೆಸಿದರೆ, ರೈತರು ನೀರಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ನಮ್ಮ ಬಳಿ ನೀರೇ ಇಲ್ಲ: ಮುಖ್ಯಮಂತ್ರಿ ಸಿದ್ಧರಾಮಯ್ಯ
ನಮಗೆ ಬೆಳೆ ರಕ್ಷಣೆ, ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೆ 106 ಟಿಎಂಸಿ ನೀರು ಅಗತ್ಯವಿದೆ. ಆದರೆ ನಮ್ಮ ನಾಲ್ಕೂ ಜಲಾಶಯಗಳಿಂದ ಕೇವಲ 51 ಟಿಎಂಸಿ ನೀರು ಇದೆ ಎನ್ನುವುದನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ನಾವು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯವನ್ನೂ ಕೇಳಿದ್ದೇವೆ. ಸಮಯ ಸಿಕ್ಕರೆ ಭೇಟಿ ಆಗುತ್ತೇವೆ. ನಾಲ್ಕೂ ರಾಜ್ಯದವರನ್ನು ಕರೆಸಿ ಮಾತನಾಡಲು ಮಧ್ಯ ಪ್ರವೇಶಿಸಿ ಎಂದು ಪ್ರಧಾನಿಗೆ ಮನವಿ ಮಾಡುತ್ತೇವೆ. 123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಆಗಿರುವುದರಿಂದ ಜಲಾಶಯಗಳ ಒಳ ಹರಿವು 11,000 ದಿಂದ 8,000 ಕ್ಯೂಸೆಕ್ ಗೆ ಇಳಿದಿದೆ. ನಮ್ಮ ರೈತರು ಮತ್ತು ನಾನಾ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬಿಡುವುದಕ್ಕೆ ನಮ್ಮ ಬಳಿ ನೀರೇ ಇಲ್ಲ ಎಂಬುದನ್ನು ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಸರಿಯಾಗಿ ಹೋಂ ವರ್ಕ್ ಮಾಡದೇ ಕೋರ್ಟ್ ಮೆಟ್ಟಿಲನ್ನು ಏರಿದ್ದು ಯಾಕೆ: ಯಡಿಯೂರಪ್ಪ ಗರಂ
ಸಮರ್ಪಕವಾಗಿ ವಾದ ಮಂಡನೆ ಮಾಡಲು ರಾಜ್ಯ ಸರ್ಕಾರ ವಿಫಲವಾದ ಕಾರಣ ವಾಸ್ತವಿಕ ಸ್ಥಿತಿಯನ್ನು ಸಮರ್ಥವಾಗಿ ಮನದಟ್ಟು ಮಾಡಿಕೊಡಲು ವಿಫಲವಾಗಿದ್ದರಿಂದ ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸರ್ಕಾರ ಮೊದಲೇ ನೀರು ಬಿಟ್ಟು ತಪ್ಪು ಮಾಡಿತು. ಇದೀಗ ಕೋರ್ಟ್ ಮುಂದೆ ಸಮರ್ಪಕ ವಾದ ಮಂಡನೆ ಮಾಡಲು ವಿಫಲವಾಗಿದೆ. ಸರಿಯಾಗಿ ಹೋಂ ವರ್ಕ್ ಮಾಡದೇ ಕೋರ್ಟ್ ಮೆಟ್ಟಿಲನ್ನು ಏರಿದ್ದು ಯಾಕೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು. ಡಿಎಂಕೆ ಹಾಗೂ ಕಾಂಗ್ರೆಸ್ ನಡುವಿನ ಚುನಾವಣಾ ಹೊಂದಾಣಿಕೆ ಕೂಡಾ ಇದಕ್ಕೆ ಒಂದು ಕಾರಣ ಎಂದು ಯಡಿಯೂರಪ್ಪ ಹೇಳಿದರು. ಕಾಂಗ್ರೆಸ್ ನಾಯಕರು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಬಿ.ಎಸ್.ವೈ ಹೇಳಿದ್ದಾರೆ.